ಅಮೆಜಾನ್ ನೌ ವಾರ್ಷಿಕೀಕೃತ ಮಾರಾಟ 1 ಬಿಲಿಯನ್ ಡಾಲರ್ ದಾಟಿದೆ

ಬೆಂಗಳೂರು: ಅಮೆಜಾನ್ ಇಂಡಿಯಾದ ತ್ವರಿತ ವಿತರಣಾ ಸೇವೆ ‘ಅಮೆಜಾನ್ ನೌ’ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಕಳೆದ ಮೂರು ತಿಂಗಳ ಮಾರಾಟವನ್ನು ಆಧರಿಸಿದ ವಾರ್ಷಿಕೀಕೃತ ಒಟ್ಟು ಮಾರಾಟವು 1 ಬಿಲಿಯನ್ ಡಾಲರ್ ಗಡಿ ದಾಟಿದೆ.
ಸೇವೆ ಆರಂಭವಾದ ಬಳಿಕ ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಅಮೆಜಾನ್ ಇಂಡಿಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಿಭಾಗವಾಗಿ ಅಮೆಜಾನ್ ನೌ ಗುರುತಿಸಿಕೊಂಡಿದೆ.
ಕೇವಲ 10 ವಾರಗಳ ಅವಧಿಯಲ್ಲಿ ಸೇವೆಯ ವ್ಯಾಪ್ತಿಯನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ಇದೀಗ ದೇಶದ 60ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳ ಗ್ರಾಹಕರಿಗೆ ಅಗತ್ಯ ವಸ್ತುಗಳು ಕೆಲವೇ ನಿಮಿಷಗಳಲ್ಲಿ ತಲುಪುತ್ತಿವೆ.

ಬೆಂಗಳೂರು ಸೇರಿದಂತೆ ಪ್ರಮುಖ ಮೆಟ್ರೋ ನಗರಗಳ ಜತೆಗೆ ಪಡುಬಿದ್ರಿ, ತಿರುಪತಿ, ಗುಂಟೂರು, ಗುರುದಾಸ್ಪುರ, ಜಲಂಧರ್, ವೆಲ್ಲೂರು, ಧಾರವಾಡ, ವಾರಂಗಲ್ ಮತ್ತು ಬರ್ಹಂಪುರದಂತಹ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೂ ಸೇವೆ ವಿಸ್ತರಿಸಲಾಗಿದೆ.

ತ್ವರಿತ ವಿತರಣೆಗೆ ಪೂರಕವಾಗಿ ಅಮೆಜಾನ್ ನೌ 750ಕ್ಕೂ ಹೆಚ್ಚು ಮೈಕ್ರೋ-ಫುಲ್‌ಫಿಲ್‌ಮೆಂಟ್ ಮತ್ತು ನಗರ ಫುಲ್‌ಫಿಲ್‌ಮೆಂಟ್ ಕೇಂದ್ರಗಳನ್ನು ಒಳಗೊಂಡ ವಿಶೇಷ ವಿತರಣಾ ಜಾಲವನ್ನು ನಿರ್ಮಿಸಿದೆ. ದೀಪಾವಳಿ ವೇಳೆಗೆ ಸೇವೆಯನ್ನು 100 ನಗರಗಳಿಗೆ ವಿಸ್ತರಿಸುವ ಗುರಿಯನ್ನು ಕಂಪನಿ ಹೊಂದಿದೆ.

ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಮಾತನಾಡಿ, ಕಡಿಮೆ ಅವಧಿಯಲ್ಲೇ ಅಮೆಜಾನ್ ನೌ 1 ಬಿಲಿಯನ್ ಡಾಲರ್ ವಾರ್ಷಿಕೀಕೃತ ಒಟ್ಟು ಮಾರಾಟದ ಗಡಿ ದಾಟಿರುವುದು ಗ್ರಾಹಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳು ದುಪ್ಪಟ್ಟಾಗುತ್ತಿದ್ದು, ದೀಪಾವಳಿಯ ವೇಳೆಗೆ 100 ನಗರಗಳಿಗೆ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಇದೇ ವರ್ಷದ ಜೂನ್‌ನಲ್ಲಿ ಅಮೆಜಾನ್, ದೇಶದ ಅತಿದೊಡ್ಡ ‘ಕೆಲವೇ ನಿಮಿಷಗಳಲ್ಲಿ ವಿತರಣೆ’ ಜಾಲವನ್ನು ನಿರ್ಮಿಸುವ ಉದ್ದೇಶದಿಂದ ಅಮೆಜಾನ್ ನೌ ಸೇವೆಯನ್ನು 300ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿತ್ತು.
ಅಮೆಜಾನ್ ನೌ ಮೂಲಕ ದಿನಸಿ, ಹಣ್ಣು–ತರಕಾರಿ, ಫ್ರೋಜನ್ ಆಹಾರ, ವೈಯಕ್ತಿಕ ಆರೈಕೆ ವಸ್ತುಗಳು, ಫ್ಯಾಷನ್ ಮತ್ತು ಬ್ಯೂಟಿ ಉತ್ಪನ್ನಗಳು, ಸಣ್ಣ ಗೃಹೋಪಯೋಗಿ ಉಪಕರಣಗಳು, ಹೋಮ್ ಮತ್ತು ಕಿಚನ್ ಉತ್ಪನ್ನಗಳು ಸೇರಿದಂತೆ ವಿವಿಧ ವಿಭಾಗಗಳ ವಸ್ತುಗಳನ್ನು ತ್ವರಿತವಾಗಿ ಆರ್ಡರ್ ಮಾಡಬಹುದಾಗಿದೆ.

ಇದರೊಂದಿಗೆ, ಅಮೆಜಾನ್ ಇಂಡಿಯಾದ ಮಾರಾಟಗಾರರು ನೀಡುವ ಹತ್ತಾರು ಸಾವಿರ ಉತ್ಪನ್ನಗಳನ್ನು ಕೆಲವೇ ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ, 10 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಮರುದಿನ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನೂ ಕಂಪನಿ ಹೊಂದಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.