
ಬೆಂಗಳೂರು, ಸೆ. 24: ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಕೇವಲ ವಸತಿ ಕಲ್ಪಿಸುವ ಬದಲು ಆರೋಗ್ಯ, ಆರೈಕೆ, ಪೌಷ್ಟಿಕಾಂಶ, ಮನರಂಜನೆ ಮತ್ತು ಸಾಮಾಜಿಕ ಸಂಪರ್ಕ ಒಳಗೊಂಡ ಸಮಗ್ರ ದೀರ್ಘಾಯುಷ್ಯ ವ್ಯವಸ್ಥೆ ನಿರ್ಮಿಸುವ ಅಗತ್ಯವಿದೆ ಎಂದು ಕಾಲಿಯರ್ಸ್ ಇಂಡಿಯಾ ಮತ್ತು ಪ್ರೈಮಸ್ ಸೀನಿಯರ್ ಲಿವಿಂಗ್ ಜಂಟಿಯಾಗಿ ಬಿಡುಗಡೆ ಮಾಡಿರುವ ‘ಭಾರತದಲ್ಲಿ ವಯಸ್ಸಾಗುವಿಕೆ ಮತ್ತು ದೀರ್ಘಾಯುಷ್ಯ ಆರ್ಥಿಕತೆಯ ಭವಿಷ್ಯ 2026’ ವರದಿ ತಿಳಿಸಿದೆ.
ದೇಶದಲ್ಲಿ 60 ವರ್ಷ ಮೇಲ್ಪಟ್ಟ 7.5 ಕೋಟಿಗೂ ಅಧಿಕ ಜನರಿದ್ದು, ಇವರಲ್ಲಿ ಹಲವರು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಹಿರಿಯರ ವಸತಿ ಕ್ಷೇತ್ರವು ಸಾಂಪ್ರದಾಯಿಕ ರಿಯಲ್ ಎಸ್ಟೇಟ್ ಮಾದರಿಯಿಂದ ಸೇವಾ ಆಧಾರಿತ ದೀರ್ಘಾಯುಷ್ಯ ಪರಿಸರ ವ್ಯವಸ್ಥೆಯತ್ತ ಸಾಗಬೇಕಿದೆ ಎಂದು ವರದಿ ಪ್ರತಿಪಾದಿಸಿದೆ.
ಆರೋಗ್ಯ ಸೇವೆಗಳ ಸುಲಭ ಲಭ್ಯತೆ, ತರಬೇತಿ ಪಡೆದ ಸಿಬ್ಬಂದಿ, ಪಾರದರ್ಶಕ ಶುಲ್ಕ ವ್ಯವಸ್ಥೆ, ಗುಣಮಟ್ಟದ ಸೇವೆ, ಆಸ್ಪತ್ರೆಗಳ ಸಹಭಾಗಿತ್ವ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆ ಈ ಕ್ಷೇತ್ರದ ಬೆಳವಣಿಗೆಗೆ ಪ್ರಮುಖವಾಗಿವೆ. ಹಿರಿಯರ ವಸತಿ ಯೋಜನೆಗಳನ್ನು ರೂಪಿಸುವಾಗ ಆಸ್ಪತ್ರೆಗಳ ಸಾಮೀಪ್ಯ, ಸಾಮಾಜಿಕ ಮೂಲಸೌಕರ್ಯ ಮತ್ತು ನಿವಾಸಿಗಳ ಜೀವನಮಟ್ಟಕ್ಕೂ ಆದ್ಯತೆ ನೀಡಬೇಕು ಎಂದು ವರದಿ ಸಲಹೆ ನೀಡಿದೆ.
ಹಿರಿಯರ ವಸತಿ ಕ್ಷೇತ್ರಕ್ಕೆ ವಿಶೇಷ ನೀತಿ ರೂಪಿಸುವುದು, ಪಾರದರ್ಶಕ ನಿಯಮಾವಳಿ ಜಾರಿಗೊಳಿಸುವುದು ಮತ್ತು ಸೂಕ್ತ ಆರ್ಥಿಕ ಪ್ರೋತ್ಸಾಹ ನೀಡುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಹೂಡಿಕೆದಾರರು ಕಟ್ಟಡದ ಗುಣಮಟ್ಟದ ಜತೆಗೆ ಸೇವಾ ನಿರ್ವಹಣೆ, ನಿವಾಸಿಗಳ ತೃಪ್ತಿ ಮತ್ತು ಸಿಬ್ಬಂದಿ ವ್ಯವಸ್ಥೆಯನ್ನೂ ಪರಿಶೀಲಿಸಬೇಕು ಎಂದು ವರದಿ ಹೇಳಿದೆ.
ಪ್ರೈಮಸ್ ಸೀನಿಯರ್ ಲಿವಿಂಗ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆದರ್ಶ ನರಹರಿ ಮಾತನಾಡಿ, ಹಿರಿಯರು ಈಗ ಕೇವಲ ಮನೆಗಿಂತ ಗೌರವ, ಸಮುದಾಯದ ಬಾಂಧವ್ಯ ಮತ್ತು ಸಕ್ರಿಯ ಜೀವನವನ್ನು ಬಯಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯ ಗುಣಮಟ್ಟ ಮತ್ತು ವಿಶ್ವಾಸವೇ ಈ ಕ್ಷೇತ್ರದ ಯಶಸ್ಸನ್ನು ನಿರ್ಧರಿಸಲಿದೆ ಎಂದರು.
City Today News 9341997936
