ಸಾಮಾಜಿಕ ನ್ಯಾಯಕ್ಕಾಗಿ ಒಬಿಸಿ ರಾಷ್ಟ್ರೀಯ ಏಕತಾ ಆಂದೋಲನಕ್ಕೆ ಕರೆ

ಬೆಂಗಳೂರು, ಅ.7: ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಇಲಾಖೆ ಅಥವಾ ಸಚಿವಾಲಯವನ್ನು ತಕ್ಷಣ ಸ್ಥಾಪಿಸಿ, ದೇಶದ ಒಬಿಸಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಲ್ಪಿಸಬೇಕು ಎಂದು ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಒತ್ತಾಯಿಸಿದೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಜೆ. ಎಂ. ಜೆರಪ್ಪ ಹಾಗೂ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಸ್ಪಷ್ಟವಾದ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದೇಶದ ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಸಮುದಾಯಕ್ಕೆ ದೊರೆಯುತ್ತಿರುವ ರಾಜಕೀಯ ಪ್ರಾತಿನಿಧ್ಯವನ್ನು ವಿಸ್ತರಿಸಿ, ವಿಧಾನಸಭೆ ಹಾಗೂ ಸಂಸತ್ ಚುನಾವಣೆಗಳಲ್ಲಿಯೂ ಒಬಿಸಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಒಬಿಸಿ ಸಮುದಾಯಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ವರ್ಷಗಳ ಕಾಲ ಬಾಕಿ ಉಳಿಯುತ್ತಿದ್ದು, ಸಮುದಾಯಕ್ಕೆ ನಿರೀಕ್ಷಿತ ನ್ಯಾಯ ದೊರೆಯುತ್ತಿಲ್ಲ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮರ್ಪಕ ಕಾನೂನು ಹಾಗೂ ಆಡಳಿತಾತ್ಮಕ ವ್ಯವಸ್ಥೆ ಅಗತ್ಯವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ದೇಶದಲ್ಲಿ 1931ರ ನಂತರ ಸಮಗ್ರ ಜಾತಿ ಆಧಾರಿತ ಜನಗಣತಿ ನಡೆದಿಲ್ಲ. ಹೀಗಾಗಿ ವಿವಿಧ ಸಮುದಾಯಗಳ ನಿಖರ ಜನಸಂಖ್ಯೆ ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತು ಸಮರ್ಪಕ ದತ್ತಾಂಶದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಗಣತಿಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು. ಜಾತಿ ಗಣತಿಯಲ್ಲಿ ಒಬಿಸಿ ಸಮುದಾಯಕ್ಕೆ ಸಂಬಂಧಿಸಿದ ಪ್ರತ್ಯೇಕ ಕಲಂ ಅಳವಡಿಸಿ, ನಿಖರವಾದ ದತ್ತಾಂಶ ಸಂಗ್ರಹಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಈ ಹಿಂದೆ ವಿವಿಧ ಒಬಿಸಿ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ನಿಗಮಗಳನ್ನು ಸ್ಥಾಪಿಸಿದ್ದರೂ, ಸಮರ್ಪಕ ಹಣಕಾಸಿನ ನೆರವು ದೊರೆಯದೆ ಅವುಗಳ ಕಾರ್ಯಚಟುವಟಿಕೆಗಳು ಕುಂಠಿತಗೊಂಡಿವೆ. ಹೀಗಾಗಿ ಎಲ್ಲಾ ಒಬಿಸಿ ಅಭಿವೃದ್ಧಿ ನಿಗಮಗಳಿಗೆ ತಲಾ ಕನಿಷ್ಠ ₹100 ಕೋಟಿ ಅನುದಾನ ಬಿಡುಗಡೆ ಮಾಡಿ, ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಹಕ್ಕುಗಳಿಗಾಗಿ ದೇಶಾದ್ಯಂತ ಒಬಿಸಿ ರಾಷ್ಟ್ರೀಯ ಏಕತಾ ಆಂದೋಲನವನ್ನು ಬಲಪಡಿಸುವ ಅಗತ್ಯವಿದೆ ಎಂದು ಮುಖಂಡರು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್, ಶಿವಪ್ಪ ಲಮಾಣಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
City Today News 9341997936
