ಸಾರ್ವಜನಿಕ ಗ್ರಂಥಾಲಯ ಇಲಾಖೆಯ 1,160 ನೌಕರರಿಗೆ 30 ವರ್ಷಗಳಿಂದ ಸೌಲಭ್ಯ ವಂಚನೆ ಆರೋಪ; ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹ

ಗ್ರಂಥಾಲಯ ಪ್ರಾಧಿಕಾರದ ಸಿಬ್ಬಂದಿ ಎಂದು ನೇಮಕಗೊಂಡವರನ್ನು ಕೈರಸೀದಿ ಶುಚಿಗಾರರೆಂದು ಬಿಂಬಿಸಿ ಅನ್ಯಾಯ: ನೌಕರರ ಸಂಘಟನೆ ಆರೋಪ

ಬೆಂಗಳೂರು: ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿರುವ ಸುಮಾರು 1,160 ನೌಕರರಿಗೆ ಕಳೆದ ಮೂರು ದಶಕಗಳಿಂದ ಸರ್ಕಾರದ ಮೂಲಭೂತ ಸೌಲಭ್ಯಗಳು ಹಾಗೂ ಕನಿಷ್ಠ ವೇತನ ದೊರೆಯದೆ ಅನ್ಯಾಯವಾಗುತ್ತಿದೆ ಎಂದು ನೌಕರರ ಸಂಘಟನೆ ಆರೋಪಿಸಿದೆ.

ರಾಜ್ಯದ ವಿವಿಧ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸುಮಾರು 30ರಿಂದ 35 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಗ್ರಂಥಾಲಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ನೌಕರರಿಗೆ ಸರ್ಕಾರದ ನಿಯಮಾನುಸಾರ ಸಿಗಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ದಿನಕ್ಕೆ ಎಂಟು ಗಂಟೆಗಳ ಕಾಲ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ, ಅವರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನೂ ಪಾವತಿಸದಿರುವುದು ದುರಂತದ ಸಂಗತಿ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ ವಿವಿಧ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಗಳ ಸಭೆಯಲ್ಲಿ ಅನುಮೋದನೆ ಪಡೆದು ಶುಚಿಗಾರರು ಹಾಗೂ ಇತರೆ ಕೆಲಸಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಪ್ರಾಧಿಕಾರದ ಅನುದಾನದಿಂದ ವೇತನ ಪಾವತಿಸಲಾಗುತ್ತಿದೆ. ಆದರೆ, ನೇಮಕಾತಿ ಮತ್ತು ನೌಕರರಿಗೆ ನೀಡಬೇಕಾದ ಸೌಲಭ್ಯಗಳ ವಿಚಾರದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

1975ರಲ್ಲಿ ರಾಜ್ಯಪಾಲರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಭಿವೃದ್ಧಿ ಹಾಗೂ ಸಾರ್ವಜನಿಕರಿಂದ ಸಂಗ್ರಹವಾಗುವ ಗ್ರಂಥಾಲಯ ಉಪಕರದ ಬಳಕೆಗೆ ಸಂಬಂಧಿಸಿದಂತೆ ರಾಜ್ಯಪತ್ರದಲ್ಲಿ ನಿಯಮಗಳನ್ನು ಪ್ರಕಟಿಸಿದ್ದರು. ಈ ನಿಯಮಗಳ ಪ್ರಕಾರ, ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದು ನೇಮಕಗೊಂಡ ಸಿಬ್ಬಂದಿಗೆ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ನೀಡಬೇಕಿದ್ದು, ಅಂತಹ ಸಿಬ್ಬಂದಿಯನ್ನು ರಾಜ್ಯ ಸರ್ಕಾರಿ ನೌಕರರ ಪರಿಗಣನೆಯಲ್ಲಿಯೇ ಗುರುತಿಸಿರುವ ಅಂಶಗಳಿವೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ನಿಯಮಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 1,160 ನೌಕರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಪರಿಸ್ಥಿತಿಗೆ ಇಲಾಖೆಯ ಆಯುಕ್ತರು ಹೊಣೆಗಾರರಾಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಕನಿಷ್ಠ ವೇತನಕ್ಕಾಗಿ ಕಾರ್ಮಿಕರು ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ದೂರು ಸಲ್ಲಿಸಿ ಹೋರಾಟ ನಡೆಸಿದ ಪರಿಣಾಮ ಗುಲ್ಬರ್ಗ ಜಿಲ್ಲೆಯಲ್ಲಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಲಾಗಿದೆ. ಆದರೆ, ಕೋಲಾರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ವೇತನವನ್ನು ಸಮರ್ಪಕವಾಗಿ ಪಾವತಿಸಲಾಗುತ್ತಿಲ್ಲ ಎಂದು ದೂರಲಾಗಿದೆ.

ಗ್ರಂಥಾಲಯ ಪ್ರಾಧಿಕಾರದಿಂದ ಪೂರ್ಣಾವಧಿ ಸಿಬ್ಬಂದಿಯಾಗಿ ನೇಮಕಗೊಂಡಿರುವ ನೌಕರರನ್ನು ‘ಕೈರಸೀದಿ ಶುಚಿಗಾರರು’ ಎಂದು ಗುರುತಿಸಿ, ಅವರು ಕಡಿಮೆ ಅವಧಿಯ ಕೆಲಸ ಮಾಡುವ ಕಾರ್ಮಿಕರು ಎಂಬ ರೀತಿಯಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತಿದೆ. ಈ ಮೂಲಕ ನೌಕರರ ಸೇವಾ ಸ್ವರೂಪವನ್ನು ತಪ್ಪಾಗಿ ಬಿಂಬಿಸಿ, ಅವರಿಗೆ ಸಿಗಬೇಕಾದ ವೇತನ ಮತ್ತು ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಅವರು ಈ ನೌಕರರ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಈ ವೇಳೆ ಸಂಬಂಧಪಟ್ಟ ಸಚಿವರು ಇಲಾಖೆಯೊಂದಿಗೆ ಚರ್ಚಿಸಿ ಕನಿಷ್ಠ ವೇತನ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇಲಾಖೆಯ ಆಯುಕ್ತರು ಸಚಿವರಿಗೆ ತಪ್ಪು ಮಾಹಿತಿ ನೀಡಿರುವ ಕಾರಣ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದು ಸಂಘಟನೆ ಆರೋಪಿಸಿದೆ.

ನೌಕರರ ಪ್ರಮುಖ ಬೇಡಿಕೆಗಳು:

1. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಭಿವೃದ್ಧಿಗೆ ದೀರ್ಘಕಾಲದಿಂದ ಶ್ರಮಿಸುತ್ತಿರುವ ನೌಕರರನ್ನು ಪ್ರಾಧಿಕಾರದ ಸಿಬ್ಬಂದಿ ಎಂದು ಅಧಿಕೃತವಾಗಿ ಪರಿಗಣಿಸಿ, ಅವರಿಗೆ ಅರ್ಹ ಸೌಲಭ್ಯಗಳನ್ನು ಒದಗಿಸಬೇಕು.
2. ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ, ನೌಕರರ ಸೇವಾ ಸ್ವರೂಪ ಮತ್ತು ಕೆಲಸದ ಅವಧಿಯ ಕುರಿತು ವಾಸ್ತವಾಂಶಗಳನ್ನು ಸಲ್ಲಿಸಬೇಕು.
3. ಇಲಾಖೆಯ ಸಚಿವರು, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಿ, ನೌಕರರ ಸೇವೆಯನ್ನು ಕಾಯಂಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು.
4. ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿಯೇ ನೌಕರರ ಬೇಡಿಕೆಗಳಿಗೆ ಪರಿಹಾರ ಒದಗಿಸಬೇಕು.

ಇದಲ್ಲದೆ, 30 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ನೌಕರರಿಗೆ ಇಎಸ್‌ಐ, ಪಿಎಫ್, ರಜೆ ಸೌಲಭ್ಯ, ಗ್ರಾಚ್ಯುಟಿ, ಸೇವಾ ಪುಸ್ತಕ ಹಾಗೂ ವೇತನ ಚೀಟಿಯಂತಹ ಮೂಲಭೂತ ಸೌಲಭ್ಯಗಳನ್ನೂ ನೀಡದೆ ವಂಚಿಸಲಾಗಿದೆ ಎಂದು ಸಂಘಟನೆ ಆರೋಪಿಸಿದೆ.

ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಇಲಾಖೆಯ ವಿರುದ್ಧ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಜಿ.ಎಸ್. ಶಿವಶಂಕರ್, ರಾಜ್ಯಾಧ್ಯಕ್ಷ ಎ.ಎನ್. ದಯಾನಂದ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಂತ್ ಕುಮಾರ್ ಯಾದವ್ ಹಾಗೂ ರಾಜ್ಯ ಖಜಾಂಚಿ ಎನ್. ಶಿವಶಂಕರ್ ಉಪಸ್ಥಿತರಿದ್ದು, ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ವಿವರಿಸಿದರು.

City Today News 9341997936

Leave a Reply

This site uses Akismet to reduce spam. Learn how your comment data is processed.