ಖಗೋಳ ವೀಕ್ಷಣೆ ಮತ್ತು ಸಂಗೀತದ ಸಂಗಮ – ಡಿಸೆಂಬರ್ 13, 14ರಂದು ‘Beat Route’ ಉತ್ಸವ

ಬೆಂಗಳೂರು: ಖಗೋಳ ವಿಜ್ಞಾನ, ಸಂಗೀತ ಮತ್ತು ಪ್ರಕೃತಿಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಡಿಸೆಂಬರ್ 13 ಮತ್ತು 14ರಂದು ‘Beat Route’ ಎಂಬ ವಿಶಿಷ್ಟ ಹೊರಾಂಗಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕುಟುಂಬಗಳು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಯೋಮಾನದ ಜನರನ್ನು ಒಂದೆಡೆ ಸೇರಿಸಿ, ಮನರಂಜನೆಯೊಂದಿಗೆ ಶೈಕ್ಷಣಿಕ ಅನುಭವವನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ನಕ್ಷತ್ರ ವೀಕ್ಷಣೆ ಮತ್ತು ಸಂಗೀತದ ಜೊತೆಗೆ ಪ್ರಕೃತಿ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಜವಾಬ್ದಾರಿಯುತ ಪ್ರವಾಸೋದ್ಯಮ ಹಾಗೂ ಪರಿಸರ ಕಾಳಜಿಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ಕೊಡಗು ವಿಶ್ವವಿದ್ಯಾಲಯದ ಚಿಕ್ಕಳುವಾರ ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಫಿಲಿಪ್ ಸಂತೋಷ್ ಅವರು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ವೇಳಾಪಟ್ಟಿ

ಡಿಸೆಂಬರ್ 13: ಮಧ್ಯಾಹ್ನ 3 ಗಂಟೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 4 ಗಂಟೆಯಿಂದ ಕ್ಯಾಂಪ್‌ಗಳ ಹಂಚಿಕೆ ನಡೆಯಲಿದೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ರಾತ್ರಿ 8 ಗಂಟೆಗೆ ನಕ್ಷತ್ರಗಳ ಪರಿಚಯ ಮತ್ತು ಖಗೋಳ ವೀಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿವೆ. ರಾತ್ರಿ 1 ಗಂಟೆಗೆ ವೇದಿಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು, ನಂತರ ನಕ್ಷತ್ರ ವೀಕ್ಷಣೆ ಮುಂದುವರಿಯಲಿದೆ.

ಡಿಸೆಂಬರ್ 14: ಬೆಳಿಗ್ಗೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಪುನರಾರಂಭವಾಗಲಿದೆ. 6.30ಕ್ಕೆ ಸೂರ್ಯೋದಯ ಯೋಗ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಧನ್ಯವಾದ ಸಮರ್ಪಣೆ ಹಾಗೂ ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಜಿಲ್ಲಾಡಳಿತದ ಎಲ್ಲ ಮಾರ್ಗಸೂಚಿ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭಾಗವಹಿಸುವವರ ಸುರಕ್ಷತೆಗೆ ಅಗತ್ಯ ಭದ್ರತಾ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ವೈದ್ಯಕೀಯ ನೆರವು, ಅಗ್ನಿ ಸುರಕ್ಷತಾ ಕ್ರಮಗಳು ಹಾಗೂ ಸಂಚಾರ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಯೋಜಕರು ಭರವಸೆ ನೀಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಅಗತ್ಯ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಆಯೋಜಕರು ಮನವಿ ಸಲ್ಲಿಸಿದ್ದು, ಆಡಳಿತದ ಸಹಕಾರದೊಂದಿಗೆ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಆಶಯ ವ್ಯಕ್ತಪಡಿಸಿದ್ದಾರೆ.

ಮನರಂಜನೆಯ ಜೊತೆಗೆ ವಿಜ್ಞಾನ, ಪರಿಸರ ಮತ್ತು ಪ್ರಕೃತಿಯ ಬಗ್ಗೆ ಹೊಸ ಅರಿವು ಮೂಡಿಸುವ ‘Beat Route’ ಕಾರ್ಯಕ್ರಮವು ಸಾರ್ವಜನಿಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆಯಿದೆ.

City Today News 9341997936

Leave a Reply

This site uses Akismet to reduce spam. Learn how your comment data is processed.