ಸೀರೆಯುಟ್ಟು ಓಟಕ್ಕೆ ಸಜ್ಜಾದ 3,200ಕ್ಕೂ ಹೆಚ್ಚು ಮಹಿಳೆಯರು; ಬೆಂಗಳೂರಿನಲ್ಲಿ ಟನೈರಾ ಸೀರೆ ರನ್ ಸಂಭ್ರಮ

ಸಾಂಪ್ರದಾಯಿಕ ಓಟದ ಜೊತೆಗೆ ಈ ಬಾರಿ ಸ್ಪರ್ಧಾತ್ಮಕ 5K ವಿಭಾಗಕ್ಕೂ ಚಾಲನೆ

ಬೆಂಗಳೂರು, ನವೆಂಬರ್ 29, 2026: ಸೀರೆ, ಸಂಭ್ರಮ, ಆರೋಗ್ಯ ಮತ್ತು ಮಹಿಳಾ ಸಬಲೀಕರಣದ ಸಂದೇಶ ಸಾರುವ ಟನೈರಾ ಸೀರೆ ರನ್ 2026 ಭಾನುವಾರ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. 3,200ಕ್ಕೂ ಹೆಚ್ಚು ಮಹಿಳೆಯರು ವಿವಿಧ ಬಗೆಯ ಸೀರೆಗಳನ್ನು ಧರಿಸಿ ಓಟದಲ್ಲಿ ಪಾಲ್ಗೊಂಡಿದ್ದು, ನಗರದ ಪ್ರಮುಖ ರಸ್ತೆಗಳು ಮತ್ತು ಸಾಂಸ್ಕೃತಿಕ ತಾಣಗಳು ಬಣ್ಣಬಣ್ಣದ ಸೀರೆಗಳ ವೈಭವದಿಂದ ಕಂಗೊಳಿಸಿದವು.

ಟಾಟಾ ಸಂಸ್ಥೆಯ ಟನೈರಾ ಹಾಗೂ ಬೆಂಗಳೂರಿನ ಫಿಟ್ನೆಸ್ ಸಂಸ್ಥೆ ಜೆಜೆ ಆಕ್ಟಿವ್ (JJ Active) ಜಂಟಿಯಾಗಿ ಆಯೋಜಿಸಿದ ಈ ಓಟಕ್ಕೆ ಸಂಪಂಗಿ ರಾಮನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಟೈಟನ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಚಾವ್ಲಾ ಹಾಗೂ ಜೆಜೆ ಆಕ್ಟಿವ್‌ನ ಮುಖ್ಯ ತರಬೇತುದಾರ ಪ್ರಮೋದ್ ದೇಶಪಾಂಡೆ ಓಟಕ್ಕೆ ಹಸಿರು ನಿಶಾನೆ ತೋರಿದರು.

ಕಂಠೀರವ ಕ್ರೀಡಾಂಗಣದಿಂದ ಆರಂಭಗೊಂಡ ಓಟವು ಕಬ್ಬನ್ ಪಾರ್ಕ್ ಹಾಗೂ ವಿಧಾನಸೌಧದ ಮುಂಭಾಗದ ಮಾರ್ಗವಾಗಿ ಸಾಗಿತು. ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೇಯ್ಗೆ ಮತ್ತು ವಿನ್ಯಾಸದ ಸೀರೆಗಳನ್ನು ಧರಿಸಿದ್ದ ಮಹಿಳೆಯರು ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡು, ಸಂಪ್ರದಾಯ ಮತ್ತು ಆರೋಗ್ಯಕರ ಜೀವನಶೈಲಿಯ ಸುಂದರ ಸಂದೇಶ ಸಾರಿದರು.

ಈ ವರ್ಷದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸ್ಪರ್ಧಾತ್ಮಕ 5K ಓಟದ ವಿಭಾಗವನ್ನು ಪರಿಚಯಿಸಲಾಗಿದ್ದು, ಹಿಂದಿನ ಆವೃತ್ತಿಗಳಿಗಿಂತ ಕ್ರೀಡಾ ಸ್ಪರ್ಧೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆರು ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಒಟ್ಟು 18 ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಸೀರೆ ಧರಿಸಿ ಓಡುವ ಮೂಲಕ ಮಹಿಳೆಯರು ತಮ್ಮ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟನೈರಾ ಸಂಸ್ಥೆಯ ಮುಖ್ಯ ಮಾರ್ಕೆಟಿಂಗ್ ಮತ್ತು ಮಾರಾಟ ಅಧಿಕಾರಿ ಸೋಮಪ್ರಾಫ್ ಸಿಂಗ್, ಆಧುನಿಕ ಭಾರತೀಯ ಮಹಿಳೆಯರು ಸಂಪ್ರದಾಯ ಮತ್ತು ಮಹತ್ವಾಕಾಂಕ್ಷೆಯನ್ನು ಸಮರ್ಥವಾಗಿ ಸಮತೋಲನಗೊಳಿಸುತ್ತಿದ್ದಾರೆ. ಕ್ರೀಡೆ, ಉದ್ಯಮ, ವಿಜ್ಞಾನ, ಆಡಳಿತ ಹಾಗೂ ಕುಟುಂಬ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಸೀರೆ ರನ್ ಮಹಿಳೆಯರ ಈ ಬಹುಮುಖ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಸಂಭ್ರಮಿಸುವ ವೇದಿಕೆಯಾಗಿದೆ. ಸೀರೆ ಕೇವಲ ಸಂಪ್ರದಾಯದ ಸಂಕೇತವಲ್ಲ, ಅದು ಚಲನೆ, ಪ್ರಗತಿ ಮತ್ತು ಸ್ವಾಭಿವ್ಯಕ್ತಿಗೂ ಪ್ರೇರಣೆಯಾಗಬಲ್ಲದು ಎಂದರು. ಈ ಬಾರಿ ಸ್ಪರ್ಧಾತ್ಮಕ 5K ವಿಭಾಗವನ್ನು ಪರಿಚಯಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಹೊಸ ಆಯಾಮ ನೀಡಲಾಗಿದೆ ಎಂದು ತಿಳಿಸಿದರು.

ಜೆಜೆ ಆಕ್ಟಿವ್‌ನ ಮುಖ್ಯ ತರಬೇತುದಾರ ಪ್ರಮೋದ್ ದೇಶಪಾಂಡೆ ಮಾತನಾಡಿ, ವಯಸ್ಸು, ಅನುಭವ ಅಥವಾ ಹಿನ್ನೆಲೆ ಯಾವುದೇ ಇರಲಿ, ಆರೋಗ್ಯ ಮತ್ತು ಫಿಟ್ನೆಸ್ ಎಲ್ಲರಿಗೂ ಸೇರಿದ್ದಾಗಿದೆ. 3,200ಕ್ಕೂ ಹೆಚ್ಚು ಮಹಿಳೆಯರು ಒಂದೇ ವೇದಿಕೆಯಲ್ಲಿ ಸೇರಿ ಓಟದ ಸಂಭ್ರಮವನ್ನು ಅನುಭವಿಸಿರುವುದು ಸಂತಸದ ಸಂಗತಿ. ಸ್ಪರ್ಧಾತ್ಮಕ 5K ವಿಭಾಗವು ಓಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು, ಗುರಿ ಸಾಧಿಸಲು ಮತ್ತು ಸೀರೆ ಧರಿಸಿಯೂ ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.

ಫಿಟ್ನೆಸ್, ಮಹಿಳಾ ಸಬಲೀಕರಣ ಹಾಗೂ ಭಾರತೀಯ ಸಾಂಪ್ರದಾಯಿಕ ಉಡುಗೆಯ ಹೆಮ್ಮೆಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿರುವ ಟನೈರಾ ಸೀರೆ ರನ್, ಮಹಿಳೆಯರಲ್ಲಿ ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸುವ ಜೊತೆಗೆ ಭಾರತೀಯ ಜವಳಿ ಪರಂಪರೆಯ ಸೌಂದರ್ಯವನ್ನು ಆಚರಿಸುವ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

City Today News 9341997936

Leave a Reply

This site uses Akismet to reduce spam. Learn how your comment data is processed.