ರಕ್ಷಾ ಬಂಧನ 2024: ಬಾದಾಮಿಯ ಆರೋಗ್ಯಕರ ಖಾದ್ಯ ಮತ್ತು ಒಳ್ಳೆಯತನದೊಂದಿಗೆ ಒಡಹುಟ್ಟಿದವರ ಬಂಧವನ್ನು ಸಂಭ್ರಮಿಸಿ

ಭಾರತ, ಆಗಸ್ಟ್ 20, 2024: ರಕ್ಷಾ ಬಂಧನವು ಹಬ್ಬದ ಋತುವಿಗೆ ನಾಂದಿ ಹಾಡುವುದರೊಂದಿಗೆ ಒಡಹುಟ್ಟಿದವರ ನಡುವಿನ ವಿಶೇಷ ಬಾಂಧವ್ಯದ ಸಂಭ್ರಮವನ್ನು ಆಚರಿಸುತ್ತದೆ, ಈ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ತಮ್ಮ ಸಹೋದರಿಯರನ್ನು ಬೆಂಬಲಿಸುವುದಾಗಿ ಮತ್ತು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ, ಅವರ ಆರೋಗ್ಯ ಮತ್ತು ಸಂತೋಷವನ್ನು ಕಾಪಾಡುವುದಾಗಿ ಭರವಸೆ ನೀಡುತ್ತಾರೆ. ಈ ಹೃತ್ಪೂರ್ವಕ ಬದ್ಧತೆಯನ್ನು ಗೌರವಿಸಲು, ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿಯಂತಹ ಪೌಷ್ಟಿಕ ಆಹಾರಗಳನ್ನು ಭಾಗವಾಗಿಸಿಕೊಳ್ಳುವ ಮೂಲಕ ಈ ರಕ್ಷಾ ಬಂಧನವನ್ನು ಇನ್ನಷ್ಟು ಅರ್ಥವಾಗಿಸಿ.
ಹಬ್ಬಗಳು ಮತ್ತು ಆಚರಣೆಗಳ ಮಧ್ಯೆ, ನಿಮ್ಮ ಆರೋಗ್ಯದ ಮೇಲೆ ಸಿಹಿ ತಿನಿಸುಗಳು ಮತ್ತು ಅನಾರೋಗ್ಯಕರ ಖಾದ್ಯಗಳು ಬೀರುವ ಪ್ರಭಾವವನ್ನು ಪರಿಗಣಿಸದೆಯೇ ಅವುಗಳನ್ನು ಅತಿಯಾಗಿ ಸೇವಿಸುವುದು ಸಾಮಾನ್ಯವಾಗಿದೆ. ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರಗಳ ಅತಿಯಾದ ಸೇವನೆಯು ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯದ ಸಮಸ್ಯೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಸೂಕ್ತವಾದ ಆಹಾರದ ಆಯ್ಕೆಗಳನ್ನು ಮಾಡುವುದು ಮಹತ್ವದ್ದಾಗಿದೆ.
ಆದ್ದರಿಂದ, ನಿಮ್ಮ ಕುಟುಂಬಕ್ಕಾಗಿ ನೀವು ಹಬ್ಬದ ಸಂತೋಷಕರ ಮತ್ತು ವಿಶೇಷ ಖಾದ್ಯಗಳನ್ನು ತಯಾರಿಸುವಾಗ, ಬಾದಾಮಿಯಂತಹ ಆರೋಗ್ಯಕರ ಆಯ್ಕೆಗಳನ್ನು ಪರಿಗಣಿಸಲು ಮರೆಯದಿರಿ. ಬಾದಾಮಿಯು ಅತ್ಯಂತ ಪೌಷ್ಟಿಕವಾಗಿದೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಎಲ್‌ಡಿಎಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಹೃದಯದ ಅತ್ಯುತ್ತಮ ಆರೋಗ್ಯ ಮತ್ತು ಒಟ್ಟಾರೆ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕೊಡುಗೆ ನೀಡುತ್ತದೆ. ಅಷ್ಟೇ ಅಲ್ಲದೇ, ಸಂಸ್ಕರಿಸಿದ ಸಕ್ಕರೆಯ ಬದಲಿಗೆ ನೈಸರ್ಗಿಕ ಸಿಹಿಕಾರಕಗಳನ್ನು ಬಳಸುವುದನ್ನು ಪರಿಗಣಿಸಿ ಮತ್ತು ಎಣ್ಣೆಯಲ್ಲಿ ಕರಿದ ಖಾದ್ಯಗಳ ಬದಲಿಗೆ ಬೇಯಿಸಿದ ಖಾದ್ಯ ನಿಮ್ಮ ಆಯ್ಕೆಯಾಗಿರಲಿ. ಚಿಂತನಶೀಲ ಆಯ್ಕೆಗಳ ಮೂಲಕ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಆಚರಣೆಗಳನ್ನು ಆನಂದಿಸಬಹುದು.
ಬಾಲಿವುಡ್ ನಟಿ ಸೋಹಾ ಅಲಿ ಖಾನ್ ರಕ್ಷಾ ಬಂಧನವನ್ನು ಹೇಗೆ ಆಚರಿಸುತ್ತೇನೆ ಎಂದು ಬಹಿರಂಗಪಡಿಸುತ್ತಾ, “ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಾ ಬಂಧನವು ವಿಶೇಷ ದಿನವಾಗಿದೆ. ಪ್ರತಿ ವರ್ಷ, ನಾವು ರಕ್ಷಾಬಂಧನವನ್ನು ಆಚರಿಸಲು ಒಟ್ಟಿಗೆ ಸೇರುತ್ತೇವೆ ಮತ್ತು ಆಚರಣೆಯ ನಂತರ, ನಾವು ಒಟ್ಟಿಗೆ ಊಟವನ್ನು ಆನಂದಿಸುತ್ತೇವೆ. ನನ್ನ ಕುಟುಂಬ ಮತ್ತು ನಾನು ಏನನ್ನು ಸೇವಿಸುತ್ತೇವೆ ಎಂಬುದರ ಬಗ್ಗೆ ಗಮನಹರಿಸುತ್ತಾ, ನಾನು ಪ್ರತಿ ವರ್ಷ ಗ್ರಿಲ್ ಮಾಡಿದ ಬಾದಾಮಿಯ ಬರ್ಫಿಯನ್ನು ತಯಾರಿಸುತ್ತೇನೆ – ಇದು ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಆಗಿದೆ. ಹಾಗೆಯೇ, ಬಾದಾಮಿಯಂತಹ ಪದಾರ್ಥಗಳನ್ನು ಇತರ ಖಾದ್ಯಗಳಲ್ಲಿಯೂ ಕೂಡ ನಾನು ಬಳಸುತ್ತೇನೆ ಏಕೆಂದರೆ ಅವುಗಳು ವಿಶೇಷ ರುಚಿಯನ್ನು ನೀಡುವುದು ಮಾತ್ರವಲ್ಲ ಆರೋಗ್ಯಕ್ಕೆ ಕೂಡ ಪ್ರಯೋಜನಕಾರಿಯಾಗಿವೆ” ಎಂದು ಹೇಳಿದರು.
ಪೋಷಣೆ ಮತ್ತು ಸ್ವಾಸ್ಥ್ಯ ಸಲಹೆಗಾರ್ತಿ ಶೀಲಾ ಕೃಷ್ಣಸ್ವಾಮಿ ಮಾತನಾಡುತ್ತಾ, “ರಕ್ಷಾ ಬಂಧನದ ಸಂದರ್ಭದಲ್ಲಿ ಸಿಹಿಖಾದ್ಯಗಳು ಅಗ್ರಗಣ್ಯವಾಗಿವೆ. ಆದರೆ, ಅನೇಕರು ರಕ್ತದ ಸಕ್ಕರೆ ಮಟ್ಟಗಳು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಅವುಗಳಿಂದ ಉಂಟಾಗುವ ಪರಿಣಾಮವನ್ನು ನಿರ್ಲಕ್ಷಿಸುತ್ತಾರೆ. ಸಕ್ಕರೆಯುಕ್ತ ಪದಾರ್ಥಗಳ ಅತಿಯಾದ ಸೇವನೆಯು ಗ್ಲೂಕೋಸ್ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಮಧುಮೇಹ ಅಥವಾ ಪೂರ್ವ-ಮಧುಮೇಹ ಸ್ಥಿತಿಯನ್ನು ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅನುಭವಿ ಪೌಷ್ಟಿಕತಜ್ಞೆಯಾಗಿ, ಬಾದಾಮಿ, ತಾಜಾ ಹಣ್ಣುಗಳು, ಇತ್ಯಾದಿ ನೈಸರ್ಗಿಕ, ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡುವ ಮೂಲಕ ವಿವೇಚನಾಯುಕ್ತ ಆಹಾರ ಸೇವನೆಯ ಅಭ್ಯಾಸವನ್ನು ಬೆಳಸಿಕೊಳ್ಳಲು ನಾನು ಶಿಫಾರಸು ಮಾಡುತ್ತೇನೆ. ಬಾದಾಮಿಯು ಪ್ರೋಟೀನ್ ಮತ್ತು ಆಹಾರದ ನಾರಿನಂಶವನ್ನು ಸಮೃದ್ಧವಾಗಿ ಹೊಂದಿದೆ, ಇದು ಆರೋಗ್ಯಕರ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಬಾದಾಮಿಯನ್ನು ಆರೋಗ್ಯಕರ ಆಹಾರದ ಭಾಗವಾಗಿಸಿಕೊಳ್ಳುವುದರಿಂದ ಗ್ಲೈಸೆಮಿಕ್ ಮತ್ತು ಹೃದಯದ ಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಟೈಪ್ II ಮಧುಮೇಹ ಮತ್ತು ಪೂರ್ವ-ಮಧುಮೇಹ ಹೊಂದಿರುವ ಭಾರತೀಯರ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ” ಎಂದು ಹೇಳಿದರು.
ಆದ್ದರಿಂದ, ಈ ರಕ್ಷಾ ಬಂಧನದಂದು ಆಚರಣೆಯು ಹಿಂದೆಂದಿಗಿಂತಲೂ ಆನಂದದಾಯಕ ಮತ್ತು ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಚಿಂತನಶೀಲ ಮತ್ತು ಸ್ಮಾರ್ಟ್ ಆಹಾರ ಆಯ್ಕೆಗಳನ್ನು ಮಾಡೋಣ.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ -ವೈಭವ “

ಈ ದಿನ ಶ್ರೀ ರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ” ಪ್ರಯುಕ್ತ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗಿನ ಜಾವಾ ಸುಪ್ರಭಾತ  ನಾದಸ್ವರ ವಾದ್ಯದೊಂದಿಗೆ ಪ್ರಾರಂಭವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅರ್ಚಕರಿಂದ  ವಿಶೇಷವಾಗಿ ಹಾಲು (ಮೊಸರು) ಮಜ್ಜಿಗೆ, ತುಪ್ಪ ,ಜೇನುತುಪ್ಪ, ಸಕ್ಕರೆ ಎಳೆನೀರು, ಇತ್ಯಾದಿ ನಾನಾ ಬಗೆಯ ಫಲಗಳಿಂದ ಫಲ ಪಂಚಾಮೃತ ಅಭಿಷೇಕ ವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣದೊಂದಿಗೆ  ನೆರವೇರಿಸಿ ಆ  ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು, ನಂತರ ಶ್ರೀ ಮಠದ ವತಿಯಿಂದ ಆರ್,ಕೆ ವಾದಿಂದ್ರಾಚಾರ್ಯರು, ಜಿ , ಕೆ ಆಚಾರ್ಯರು ಮತ್ತು ಶ್ರೀ  ನಂದಕಿಶೋರಾಚಾರ್ಯರು “ಲೋಕ-ಕಲ್ಯಾಣಕ್ಕಾಗಿ” ಗುರು ರಾಯರಲ್ಲಿ  ಪ್ರಾರ್ಥನೆಯನ್ನು ಸಲ್ಲಿಸಿ  ಸ್ವರ್ಣ ಸಿಂಹಾಸನದಲ್ಲಿ ಶ್ರೀ ರಾಯರಿಗೆ ಪಾದಪೂಜೆ  ನೆರವೇರಿಸಿದರು, ಭಕ್ತರು ಕೂಡ ಸಾಮೂಹಿಕವಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಪಾದಪೂಜೆ ಫಲ ಸಮರ್ಪಣೆ ಸಮರ್ಪಿಸಿದರು,  ಈ ಸಂದರ್ಭದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸುಗಂಧ ದ್ರವ್ಯ ನಾನಾ ವಿಧವಾದ ಪುಷ್ಪಗಳಿಂದ ಅಲಂಕರಿಸಲಾಯಿತು, ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆಯು   ನೆರವೇರಿತು, ಗುರು ರಾಯರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ಕ್ಯೂ ವ್ಯವಸ್ಥೆ, ಪ್ರಸಾದಕ್ಕೂ ಕ್ಯೂ ವ್ಯವಸ್ಥೆ, ಹಿರಿಯ ನಾಗರಿಕ ವಯೋವೃದ್ಧರಿಗೂ  ಪ್ರತ್ಯೇಕ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ,  ಈ ದಿನ ಸಂಜೆ “ಪ್ರವಚನ” ವಿಶೇಷವಾಗಿ ‘ರಜತ – ಸ್ವರ್ಣ -ಲೇಪಿತ ಗಜವಾಹನ ಉತ್ಸವದೊಂದಿಗೆ ಸಂಜೆ 7 ಕ್ಕೆ “ದಾಸ-ಲಹರಿ” ವಿದ್ವಾನ್- ಶ್ರೀ ಪ್ರಾದೇಶಾಚಾರ್ಯ ವೃಂದ  ದಿಂದಗಾಯನ ಕಾರ್ಯಕ್ರಮವು ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳು ರಾಯರ ಅನುಗ್ರಹ  ಮತ್ತು ಭಕ್ತರ, ಸ್ವಯಂ ಸೇವಕರ ಸಿಬ್ಬಂದಿಗಳ, ಸಹಕಾರ ಹಾಗೂ ಮಂತ್ರಾಲಯ ಶ್ರೀಗಳ ಆಶೀರ್ವಾದದಿಂದ, ಆರ್ ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರುತ್ತಿದೆ.

City Today News 9341997936

ಜಯನಗರ ರಾಯರ ಮಠದಲ್ಲಿ ಗುರುಗಳ ಆರಾಧನಾ ಸಪ್ತರಾತ್ರೋತ್ಸವ

ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 18 ರಿಂದ 24ರ ವರೆಗೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ. ಆರಾಧನೆಯ ಎಲ್ಲಾ ದಿನಗಳಲ್ಲೂ ಪ್ರತಿದಿನ ಬೆಳಗ್ಗೆ ಗುರುಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಪಂಚಾಮೃತ ಅಭಿಷೇಕ, ರಾಯರ ಪಾದಪೂಜೆ, ಕನಕಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆಯಿರುತ್ತದೆ.

ಕಾರ್ಯಕ್ರಮಗಳು :
 ಆಗಸ್ಟ್ 18 , ಭಾನುವಾರ : ಸಂಜೆ 6-30ಕ್ಕೆ ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಪ್ತರಾತ್ರೋತ್ಸವದ ಉದ್ಘಾಟನೆ, ಗೋಪೂಜೆ, ಧನ-ಧಾನ್ಯ ಪೂಜೆ.
 ಆಗಸ್ಟ್ 19 , ಸೋಮವಾರ : ಬೆಳಗ್ಗೆ ಋಗ್ವೇದ, ಯಜುರ್ವೇದ ಮತ್ತು ನಿತ್ಯ ನೂತನ ಉಪಾಕರ್ಮ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ಸಂಜೆ 7-00ಕ್ಕೆ ವಿದುಷಿ ಶ್ರೀಮತಿ ಮೇಘಾ ಶಿವಕುಮಾರ್ ಮತ್ತು ವೃಂದದವರಿಂದ  “ದಾಸವಾಣಿ”.
 ಆಗಸ್ಟ್ 20 , ಮಂಗಳವಾರ : ಸಂಜೆ 7-00ಕ್ಕೆ ವಿದ್ವಾನ್ ಪ್ರಾದೇಶಾಚಾರ್ ಮತ್ತು ಸಂಗಡಿಗರಿಂದ  “ದಾಸಲಹರಿ”.
 ಆಗಸ್ಟ್ 21 , ಬುಧವಾರ : ಸಂಜೆ 7-00ಕ್ಕೆ ಬೆಂಗಳೂರು ಸಹೋದರರಾದ ವಿದ್ವಾನ್  ಹರಿಹರನ್ ಎಂ.ಬಿ., ವಿದ್ವಾನ್ ಎಸ್. ಅಶೋಕ್ ಮತ್ತು ಸಂಗಡಿಗರು “ದಾಸತರಂಗಿಣಿ”.
 ಆಗಸ್ಟ್ 22 , ಗುರುವಾರ ; ಬೆಳಗ್ಗೆ 8-00ಕ್ಕೆ ಜಯನಗರದ ರಾಜಬೀದಿಯಲ್ಲಿ ಶ್ರೀ ಗುರುರಾಜರ ಮಹಾ ರಥೋತ್ಸವ, ಸಂಜೆ 6-30ಕ್ಕೆ ವಿದ್ವಾನ್ ಜಯತೀರ್ಥ ಮೇವುಂಡಿ ಮತ್ತು ಸಂಗಡಿಗರಿಂದ “ದಾಸ ಝೇಂಕಾರ”.
 ಆಗಸ್ಟ್ 23 , ಶುಕ್ರವಾರ : ಸಂಜೆ 7-00ಕ್ಕೆ ವಿದ್ವಾನ್ ಜನಾರ್ಧನ್ ಮತ್ತು ಸಂಗಡಿಗರಿಂದ  “ಸ್ಯಾಕ್ಸೋಫೋನ್ ವಾದನ”.
 ಆಗಸ್ಟ್ 24 , ಶನಿವಾರ : ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ  “ಭರತನಾಟ್ಯ ಪ್ರದರ್ಶನ “.

ಆರಾಧನೆಯ ಎಲ್ಲಾ ದಿನಗಳಲ್ಲೂ ಪ್ರತಿದಿನ ಸಂಜೆ 5-30ಕ್ಕೆ ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ “ಶ್ರೀ ಗುರುಗುಣಸ್ತವನ” ವಿಷಯವಾಗಿ ಧಾರ್ಮಿಕ ಪ್ರವಚನ ಜರುಗುತ್ತದೆ. ಈ ಆರಾಧನಾ ಮಹೋತ್ಸವದಲ್ಲಿ ಅಂದಾಜು 50,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ “ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಲಿದೆ. ಈ ಸುಸಂದರ್ಭದಲ್ಲಿ ಶ್ರೀ ಗುರುರಾಯರಿಗೆ  ಸೇವೆಯನ್ನು ಮಾಡಿಸುವಂತಹ ಭಕ್ತರು  ವಾಟ್ಸಪ್ ಈ ನಂಬರ್ 9449133929  ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು.  ಸೇವೆಯನ್ನು ಸಲ್ಲಿಸಿದ  ಭಕ್ತರಿಗೆ ಶೇಷವಸ್ತ್ರ, ಫಲ ಮಂತ್ರಾಕ್ಷತೆ, ಪರಿಮಳ ಮಹಾಪ್ರಸಾದ, ಕೊಡಲಾಗುವುದು ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ 08022443962-9945429129-9449133929-8660349906

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ “ಆರಾಧನಾ” ಮಹೋತ್ಸವ

ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ “ಆರಾಧನಾ” ಮಹೋತ್ಸವದ ಆಹ್ವಾನಪತ್ರಿಕೆಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರಿಂದ ಸ್ವೀಕರಿಸಿದ ಹಿರಿಯ ಹಾಸ್ಯ ಚಿತ್ರನಟರಾದ ಶ್ರೀ ಉಮೇಶ್ ರವರು .ಈ ಸಂದರ್ಭದಲ್ಲಿ ಶ್ರೀ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.

City Today News 9341997936

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ

ದಿನಾಂಕ:-12/02/1935 ರಂದು ಹನ್ಯಾಳು ಗ್ರಾಮದಲ್ಲಿ ಜನಿಸಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ರುದ್ರಪಟ್ಟಣ & ಬಸವಪಟ್ಟಣದಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಹಾಸನದಲ್ಲಿ, ಬಿ ಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಾಗೂ ಎಲ್ ಎಲ್ ಬಿ ಯನ್ನು ಶಾರದ ವಿಲಾಸ್ ಮೈಸೂರಿನಲ್ಲಿ ಪಡೆದು ವಿದ್ಯಾರ್ಥಿ ಸಂಘದ ಚುನಾವಣೆಗೆ ಪ್ರತಿನಿಧಿಸುವ ಮೂಲಕ ಅಂದಿನ ಕಾಲದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ನಂತರ 16 ಮೇ 1962 ರಂದು ದೇವರಹಟ್ಟಿ ಅಷ್ಟೇಗೌಡರ ಹಾಗೂ ಮಾಯಮ್ಮ ದಂಪತಿಗಳ ಹಿರಿಯ ಪುತ್ರಿಯಾದ (ಇಂದಿನ ಅರಕಲಗೂಡು ಕ್ಷೇತ್ರದ ಶಾಸಕರಾದ ಶ್ರೀಯುತ ಎ ಮಂಜುರವರ ಅಕ್ಕ) ಕಮಲಮ್ಮರವರ ಜೊತೆ ರಾಮನಾಥಪುರದ ರಾಮೇಶ್ವರ ದೇವಾಲಯದಲ್ಲಿ ವಿವಾಹವಾದರು. ನಂತರ 1962ರ ಅರಕಲಗೂಡು ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಜಿ.ಎ. ತಿಮ್ಮಪ್ಪ ಗೌಡರ ವಿರುದ್ಧ ಸೋತಿದ್ದರು. ನಂತರ 1967ರಲ್ಲಿ ಅರಕಲಗೂಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರ ವಿರುದ್ಧ ಗೆಲುವು ಸಾಧಿಸಿದರು.

ಆ ಕಾಲದಲ್ಲಿ ಹೇಮಾವತಿ ಡ್ಯಾಮ್ ಕಟ್ಟುವಾಗ ಮುಳುಗಡೆಯಾದ ನಿರಾಶ್ರಿತರಿಗೆ 50 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟು ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಅನಂತರ 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರನ್ನು ಎರಡನೇ ಬಾರಿಗೆ ಸೋಲಿಸಿದ್ದು, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರವರ ಸಂಪುಟ ಸೇರಿ ನೀರಾವರಿ ಸಚಿವರಾಗಿದ್ದು, ಹಾರಂಗಿ ಜಲಾಶಯ ನೀರನ್ನು ಅರಕಲಗೂಡು ತಾಲೂಕಿನ ರೈತರಿಗೆ ಕಾಲುವೆಗಳ ಮುಖಾಂತರ ನೀರು ಹರಿಯುವಂತೆ ಮಾಡಿ ಅರಕಲಗೂಡು ಭಾಗದ ಜನಕ್ಕೆ ನೀರಾವರಿ ಸೌಲಭ್ಯ ಒದಗಿಸಿದ ಭಗೀರಥರಾದರು.

ಅರಕಲಗೂಡು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಲು ಸಹಕರಿಸಿದರು ಹಾಗೂ ಹೇಮಾವತಿ ಜಲಾಶಯ ಯೋಜನೆ ಜಾರಿಯಾಗಿದ್ದ ಆ ಸಂದರ್ಭದಲ್ಲಿ ಹಿನ್ನೀರಿನ ಸಮರ್ಪಕ ಬಳಕೆಗೆ ಹಲವು ಚೆಕ್ ಡ್ಯಾಮ್ ನಿರ್ಮಿಸಲು ಕಾರಣೀ ಭೂತರಾಗಿದ್ದರು. ನಂತರ 1980 ರಿಂದ 1989 ರವರೆಗೆ ಎರಡು ಬಾರಿಗೆ ಹಾಸನ ಲೋಕಸಭೆಯಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು ಆ ಸಂದರ್ಭದಲ್ಲಿ ನೀರಾವರಿ ವಿಷಯಗಳ ಸಂಬಂಧಿಸಿದಂತೆ ಅದರಲ್ಲೂ ಕಾವೇರಿ ಜಲ ವಿವಾದಗಳು ಸಂಭವಿಸಿದಾಗ ಮಾನ್ಯರು ಅಂದಿನ ರಾಜ್ಯದ ಮುಖ್ಯಮಂತ್ರಿಗಳೊಡಗೂಡಿ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಹಲವು ಬಾರಿ ರಾಜ್ಯಕ್ಕೆ ಬಂದೊದಗುತ್ತಿದ್ದ ಹಲವಾರು ತೊಡಕುಗಳನ್ನು ಬಗೆಹರಿಸಿದ್ದರು.

ಶ್ರೀಯುತ ಚನ್ನಬಸಪ್ಪನವರ ಶಿಷ್ಯರಾಗಿದ್ದ ನಂಜೇಗೌಡರು ರಾಜ್ಯದ ನೀರಾವರಿ ವಿಷಯಗಳ ಬಗ್ಗೆ ಅಗಾಧವಾದ ಜ್ಞಾನಪಡೆದಿದ್ದ ಇವರು ದುರದೃಷ್ಟವಶಾತ್ ಸನ್ಮಾನ್ಯರ ನೇರ ದಿಟ್ಟ ನುಡಿಯೇ ಅವರಿಗೆ ಮುಳುವಾಗಿದ್ದಕ್ಕೆ ಹಲವು ನಿದರ್ಶನಗಳಿವೆ. ಒಮ್ಮೆ 1987ರಲ್ಲಿ ಸಂಸತ್ ಭವನದ ಭಾಷಣದಲ್ಲಿ ಸ್ವಪಕ್ಷೀಯರ ವಿರುದ್ಧ ಬೊಫೋರ್ಸ್ ಹಗರಣದ ಬಗ್ಗೆ ಧ್ವನಿಯೆತ್ತಿ ಸ್ವಪಕೀಯರ ವಿರೋದಕ್ಕೆ ಗುರಿಯಾಗಿದ್ದರು.

ನಂತರ 1994ರಲ್ಲಿ ಬಿಜೆಪಿಯಿಂದ ಬಸವನಗುಡಿಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದರು. ಇವರ ಹೆಸರಿನಲ್ಲಿ ಈಗಲೂ ಬಸವನಗುಡಿಯ ಒಂದು ರಸ್ತೆಗೆ ಹೆಸರಿಟ್ಟಿರುವುದು ಅವರ ಸಾಧನೆಯ ಕೈಗನ್ನಡಿಯಾಗಿದೆ. ಹೆಚ್‌ಎನ್ ನಂಜೇಗೌಡರವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಎಸ್ ಎಂ ಕೃಷ್ಣ, ರವರು ಕೆ.ಎಚ್ ಪಟೇಲರು, ಬೊಮ್ಮಾಯಿಯವರು ಹೀಗೆ ಹಲವಾರು ಗಣ್ಯಾತಿ ಗಣ್ಯರೊಡನೆ ನೀರಾವರಿ ವಿಷಯ ಬಂದಾಗ ಸಲಹೆಗಳನ್ನು ನೀಡುತ್ತಿದ್ದರು.

1994ರ ನಂತರ ರಾಜಕೀಯವಾಗಿ ಏಳುಬೀಳುಗಳನ್ನು ಕಂಡರು ಯಾವುದೇ ಪಕ್ಷದ ಯಾರೇ ಅಧಿಕಾರದಲ್ಲಿದ್ದರೂ ಕಾವೇರಿ ವಿವಾದ ತಲೆದೋರಿದಾಗ ಮಾನ್ಯ ನಂಜೇಗೌಡರ ಸಲಹೆ ಪಡೆದೇ ಮುಂದಿನ ರೂಪರೇಷೆ ರಚಿಸುತ್ತಿದ್ದ ಹಲವಾರು ನಿದರ್ಶನಗಳಿವೆ. ಇವರು ದಿನಾಂಕ 19 ಡಿಸೆಂಬರ್ 2008ರಲ್ಲಿ ಇಹಲೋಕ ತ್ಯಜಿಸಿ ಜನಮನದಲ್ಲಿ ಅಜರಾಮರರಾದರು.

ಹಲವಾರು ವರ್ಷಗಳ ನಂತರ ಮಾನ್ಯರ ಬಗ್ಗೆ ಕಾರ್ಯಕ್ರಮವನ್ನು ದಿನಾಂಕ 11.08.2024 ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ಒಕ್ಕಲಿಗ ಸಂಘದ ಕ್ಯಾಂಪಸ್ ನಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ ನಡೆಸುತ್ತಿರುವುದು ಹಾಸನ ಭಾಗದ ಜನತೆಗೆ ಒಂದು ಸಂತೋಷದ ಸಂಗತಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೆಚ್.ಎನ್. ನಂಜೇಗೌಡರ ಅಭಿಮಾನಿ ವೃಂದ ದ ವತಿಯಿಂದ ತಿಳಿಸಲಾಯಿತು.

City Today News 9341997936