ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ಆದೇಶ ನಿರ್ಲಕ್ಷ್ಯ? ವಿಶ್ವಕರ್ಮ ಸಂಘಟನೆಗಳ ಆಕ್ರೋಶ

ಬೆಂಗಳೂರು: ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು, ಪುತ್ತೂರಿನ ಪೂಜಾ ಆಚಾರ್ಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕೃಷ್ಣ ಜೆ. ರಾವ್ ಹಾಗೂ ಅವರ ಕುಟುಂಬ ಸದಸ್ಯರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ Press Club of Bangalore ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಹಲವಾರು ದಿನಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, 24.04.2026ರಂದು ಘನ ಉಚ್ಚ ನ್ಯಾಯಾಲಯವು ಆರೋಪಿಯಾದ ಪಿ.ಜಿ. ಶ್ರೀಕೃಷ್ಣ ರಾವ್ ಅವರಿಗೆ ಮಧ್ಯಂತರ ತಡೆ ಆದೇಶ ನೀಡಿದ ವೇಳೆ ಕೆಲವು ಷರತ್ತುಗಳನ್ನು ವಿಧಿಸಿತ್ತು ಎಂದು ತಿಳಿಸಿದರು.

ನ್ಯಾಯಾಲಯದ ಆದೇಶದ ಪ್ರಕಾರ, ದೂರುದಾರರಾದ ಪೂಜಾ ಆಚಾರ್ಯ ಹಾಗೂ ಮಗುವಿನ ಜೀವನೋಪಾಯ ಮತ್ತು ಕಲ್ಯಾಣಕ್ಕಾಗಿ 01.05.2026ರೊಳಗೆ ₹75 ಸಾವಿರವನ್ನು ಪಾವತಿಸಬೇಕು ಹಾಗೂ ಅಂತಿಮ ತೀರ್ಪು ಬರುವವರೆಗೂ ಪ್ರತಿಮಾಸ ₹75 ಸಾವಿರವನ್ನು ನೀಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಇಂದಿನವರೆಗೆ ಒಂದು ರೂಪಾಯಿಯನ್ನೂ ಪಾವತಿಸದೆ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ಅವರು ಹೇಳಿದರು.

ಪೂಜಾ ಆಚಾರ್ಯ ಅವರು ಹಿಂದುಳಿದ ವರ್ಗದ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹೋರಾಟವನ್ನು ಸಂಬಂಧದ ಆಧಾರದಲ್ಲಿ ಅಲ್ಲ, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕೈಗೆತ್ತಿಕೊಂಡಿದ್ದೇವೆ ಎಂದು ನಂಜುಂಡಿ ಸ್ಪಷ್ಟಪಡಿಸಿದರು. ಇಂತಹ ಅನ್ಯಾಯದ ವಿರುದ್ಧ ಸಮಾಜ ಮೌನವಾಗಿರುವುದಿಲ್ಲ. ರಾಜ್ಯದ ಜನತೆಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ನಿರೀಕ್ಷೆಯಿದೆ ಎಂದರು.

ಪೂಜಾ ಆಚಾರ್ಯ ಹಾಗೂ ಮಗುವಿಗೆ ನ್ಯಾಯ ಸಿಗುವವರೆಗೂ ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೀಲಕಂಠ ಮಹಾಸ್ವಾಮಿಜಿಗಳು, ದೊಡ್ಡಂದ್ರ ಸ್ವಾಮಿಜಿಗಳು, ಗಣೇಶ ಮಹಾಸ್ವಾಮಿಗಳು, ಆರ್. ಪ್ರಸನ್ನಕುಮಾರ್, ಜಿ. ರವಿಕುಮಾರ್ ಹಾಗೂ ಜನಾರ್ಧನ್ ಉಪಸ್ಥಿತರಿದ್ದರು.

City Today News 9341997936