ಅನು ಪ್ರಭಾಕರ್, ರಿತ್ವಿಕ್, ಮಹತಿ ಭಟ್ ಅಭಿನಯದ ಹೊಸ ಧಾರಾವಾಹಿ ನವೆಂಬರ್ 16ರಿಂದ ಪ್ರಸಾರ; ಪ್ರತಿದಿನ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ವೀಕ್ಷಿಸಿ

ಬೆಂಗಳೂರು, ನವೆಂಬರ್ 12, 2026: ಬದುಕಿನಲ್ಲಿ ಎಲ್ಲವೂ ಇದ್ದರೂ ತವರಿನ ಪ್ರೀತಿ ಮತ್ತು ಆತ್ಮೀಯ ಸಂಬಂಧಗಳಿಗಾಗಿ ಹಂಬಲಿಸುವ ತಾಯಿಯ ಮನದ ನೋವನ್ನು ಅರ್ಥಮಾಡಿಕೊಳ್ಳುವ ಮಗನೊಬ್ಬ, ಆಕೆಯ ಬಹುದಿನಗಳ ಕನಸನ್ನು ನನಸು ಮಾಡಲು ಹೊರಟರೆ? ತಾಯಿ-ಮಗನ ನಡುವಿನ ಇಂತಹ ಅಪರೂಪದ ಬಾಂಧವ್ಯ, ಕೌಟುಂಬಿಕ ಸಂಬಂಧಗಳ ಭಾವನಾತ್ಮಕ ಬೆಸುಗೆ ಹಾಗೂ ಅನಿರೀಕ್ಷಿತ ತಿರುವುಗಳೊಂದಿಗೆ ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿ ‘ಗೌರಿಪುತ್ರ’ವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಅನು ಪ್ರಭಾಕರ್, ರಿತ್ವಿಕ್ ಹಾಗೂ ಮಹತಿ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಗೌರಿಪುತ್ರ’, ತನ್ನ ತಾಯಿಗೆ ಕಳೆದುಹೋದ ತವರಿನ ಪ್ರೀತಿ ಮತ್ತು ಸಂಬಂಧಗಳನ್ನು ಮರಳಿ ಕೊಡಿಸಬೇಕೆಂಬ ಮಗನ ಹಂಬಲದ ಸುತ್ತ ಹೆಣೆದಿರುವ ಭಾವನಾತ್ಮಕ ಕಥೆಯಾಗಿದೆ. ಕುಟುಂಬದ ಪ್ರೀತಿ, ಸಂಬಂಧಗಳ ಸಂಘರ್ಷ, ತ್ಯಾಗ ಹಾಗೂ ಅನಿರೀಕ್ಷಿತ ಸನ್ನಿವೇಶಗಳೊಂದಿಗೆ ಸಾಗುವ ಈ ಕಥೆ ವೀಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ.

ಎಲ್ಲವೂ ಇದ್ದರೂ ತವರಿನ ಪ್ರೀತಿಗಾಗಿ ಹಂಬಲಿಸುವ ತಾಯಿ!
ಕಾರ್ತಿಕ್ಗೆ (ರಿತ್ವಿಕ್) ತನ್ನ ತಾಯಿ ಗೌರಿ (ಅನು ಪ್ರಭಾಕರ್) ಎಂದರೆ ಎಲ್ಲಿಲ್ಲದ ಪ್ರೀತಿ. ಅಪ್ಪ, ಅಮ್ಮ, ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಹೀಗೆ ತುಂಬು ಕುಟುಂಬದ ಪ್ರೀತಿಯ ನಡುವೆ ಬೆಳೆದಿರುವ ಕಾರ್ತಿಕ್ಗೆ ತಾಯಿಯೇ ಸರ್ವಸ್ವ. ಆಕೆಯ ಸಂತೋಷವೇ ತನ್ನ ಸಂತೋಷ ಎಂದು ಭಾವಿಸುವ ಕಾರ್ತಿಕ್, ತಾಯಿಯ ಮನಸ್ಸಿಗೆ ನೋವಾಗುವುದನ್ನು ಎಂದಿಗೂ ಬಯಸುವುದಿಲ್ಲ.
ಮತ್ತೊಂದೆಡೆ, ಗೌರಿಯ ಬದುಕಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಆಸ್ತಿ, ಐಶ್ವರ್ಯ, ಅಂತಸ್ತು, ದೊಡ್ಡ ಕುಟುಂಬದ ಜವಾಬ್ದಾರಿ ಹಾಗೂ ಹಲವು ಕಂಪನಿಗಳ ನಿರ್ವಹಣೆ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಆಕೆಯ ಜೀವನ ಹೊರನೋಟಕ್ಕೆ ಸಂಪೂರ್ಣ ಸುಖಮಯವಾಗಿ ಕಾಣುತ್ತದೆ. ಆದರೆ, ಈ ಎಲ್ಲ ಸಿರಿಸಂಪತ್ತು ಮತ್ತು ಸೌಲಭ್ಯಗಳ ನಡುವೆಯೂ ಆಕೆಯ ಮನಸ್ಸಿನಲ್ಲಿ ಸದಾ ಕಾಡುವ ಕೊರತೆಯೊಂದಿದೆ. ಅದುವೇ ತನ್ನ ತವರು ಮನೆ, ಅಣ್ಣನ ಪ್ರೀತಿ ಮತ್ತು ಆತ್ಮೀಯ ಒಡನಾಟ!
ಮದುವೆಯಾಗಿ ಹಲವು ವರ್ಷಗಳು ಕಳೆದಿದ್ದರೂ ತವರಿನಿಂದ ದೂರವಾಗಿರುವ ನೋವು ಗೌರಿಯ ಮನಸ್ಸನ್ನು ಕಾಡುತ್ತಲೇ ಇರುತ್ತದೆ. ಬಾಲ್ಯದ ನೆನಪುಗಳು, ಒಡಹುಟ್ಟಿದವರ ಪ್ರೀತಿ ಹಾಗೂ ತವರು ಮನೆಯ ಆತ್ಮೀಯತೆ ಆಕೆಗೆ ಸದಾ ನೆನಪಾಗುತ್ತಿರುತ್ತದೆ. ಹೆಣ್ಣಿನ ಬದುಕಿನಲ್ಲಿ ತವರು ಮನೆ ಎನ್ನುವುದು ಕೇವಲ ಒಂದು ಮನೆಯಲ್ಲ; ಅದು ಭಾವನೆಗಳ, ನೆನಪುಗಳ ಮತ್ತು ನಿಸ್ವಾರ್ಥ ಪ್ರೀತಿಯ ನೆಲೆ ಎಂಬುದನ್ನು ಈ ಧಾರಾವಾಹಿ ಮನಮುಟ್ಟುವಂತೆ ಕಟ್ಟಿಕೊಡಲಿದೆ.

ತಾಯಿಯ ಮನದಾಳದ ನೋವನ್ನು ಅರಿತುಕೊಳ್ಳುವ ಕಾರ್ತಿಕ್, ಆಕೆಯ ಬಹುದಿನಗಳ ಆಸೆಯನ್ನು ಈಡೇರಿಸುವ ಸಂಕಲ್ಪ ಮಾಡುತ್ತಾನೆ. ತಾಯಿಗೆ ಮತ್ತೆ ತವರಿನ ಪ್ರೀತಿ, ಅಣ್ಣನ ಒಡನಾಟ ಮತ್ತು ಕುಟುಂಬದ ಆತ್ಮೀಯ ಸಂಬಂಧಗಳನ್ನು ಮರಳಿಸಬೇಕೆಂಬ ಉದ್ದೇಶದಿಂದ ತನ್ನ ಪ್ರಯತ್ನ ಆರಂಭಿಸುತ್ತಾನೆ.
ಆದರೆ, ತಾಯಿಯ ಕನಸನ್ನು ನನಸು ಮಾಡುವ ಈ ಪಯಣದಲ್ಲಿ ಕಾರ್ತಿಕ್ನ ಬದುಕಿಗೆ ‘ಮದುವೆ’ ಎಂಬ ಅನಿರೀಕ್ಷಿತ ತಿರುವು ಎದುರಾಗುತ್ತದೆ. ಈ ಹೊಸ ಸವಾಲುಗಳನ್ನು ಆತ ಹೇಗೆ ಎದುರಿಸುತ್ತಾನೆ? ತಾಯಿಯ ಬಹುದಿನಗಳ ಆಸೆಯನ್ನು ಈಡೇರಿಸಲು ಸಾಧ್ಯವಾಗುತ್ತದೆಯೇ? ಆಕೆಯ ಬದುಕಿನಲ್ಲಿ ಮತ್ತೆ ತವರಿನ ಸಂತೋಷವನ್ನು ತುಂಬಲು ಯಶಸ್ವಿಯಾಗುತ್ತಾನೆಯೇ? ಎಂಬ ಕುತೂಹಲಕಾರಿ ಅಂಶಗಳೇ ‘ಗೌರಿಪುತ್ರ’ ಧಾರಾವಾಹಿಯ ಕಥೆಗೆ ವಿಶೇಷ ಮೆರುಗು ನೀಡಿವೆ.
ಅನುಭವಿ ಕಲಾವಿದರ ಸಮಾಗಮ; ರಾಮ್ಜಿ ನಿರ್ಮಾಣ ಮತ್ತು ನಿರ್ದೇಶನ
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಜನಪ್ರಿಯ ಕಲಾವಿದರಾದ ಅನು ಪ್ರಭಾಕರ್, ರಿತ್ವಿಕ್ ಮತ್ತು ಮಹತಿ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಹಿರಿಯ ನಟ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ಕಿರುತೆರೆಯ ಹಲವು ಪರಿಚಿತ ಮುಖಗಳು, ರಂಗಭೂಮಿ ಕಲಾವಿದರು ಹಾಗೂ ಚಿತ್ರರಂಗದ ಪ್ರತಿಭಾವಂತ ನಟರು ತಾರಾಗಣದಲ್ಲಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹಲವು ಯಶಸ್ವಿ ಹಾಗೂ ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ನೀಡಿರುವ ರಾಮ್ಜಿ ಅವರು ಈ ಧಾರಾವಾಹಿಯ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅನುಭವಿ ಕಲಾವಿದರ ಅಭಿನಯ, ಮನಮುಟ್ಟುವ ಕಥಾಹಂದರ ಮತ್ತು ಕೌಟುಂಬಿಕ ಭಾವನೆಗಳ ಸುಂದರ ನಿರೂಪಣೆಯೊಂದಿಗೆ ‘ಗೌರಿಪುತ್ರ’ ವೀಕ್ಷಕರ ಮನಗೆಲ್ಲಲು ಸಜ್ಜಾಗಿದೆ.
ಕೌಟುಂಬಿಕ ಕಥೆಗಳು ಪ್ರೇಕ್ಷಕರಿಗೆ ಸದಾ ಹತ್ತಿರ: ದೀಪಕ್ ಶ್ರೀರಾಮುಲು
ಧಾರಾವಾಹಿಯ ಕುರಿತು ಮಾತನಾಡಿದ ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು, “ಕೌಟುಂಬಿಕ ಕಥೆಗಳು ಯಾವಾಗಲೂ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿವೆ. ಕುಟುಂಬದ ಭಾವನೆಗಳು, ಸಂಬಂಧಗಳ ಬೆಸುಗೆ ಹಾಗೂ ಬದುಕಿನ ಸಣ್ಣಪುಟ್ಟ ಸಂತೋಷ-ಸಂಕಟಗಳಲ್ಲಿ ಪ್ರೇಕ್ಷಕರು ತಮ್ಮದೇ ಜೀವನದ ಪ್ರತಿಬಿಂಬವನ್ನು ಕಾಣುತ್ತಾರೆ.
‘ಗೌರಿಪುತ್ರ’ ಕೂಡ ಅಂತಹದ್ದೇ ಒಂದು ಹೃದಯಸ್ಪರ್ಶಿ ಕಥೆ. ತಾಯಿ ಮತ್ತು ಮಗನ ನಡುವಿನ ಗಾಢವಾದ ಬಾಂಧವ್ಯ, ತಾಯಿಯ ಬಹುದಿನಗಳ ಆಸೆಯನ್ನು ಈಡೇರಿಸಲು ಮಗ ಪಡುವ ಪ್ರಯತ್ನ ಹಾಗೂ ಅದರ ಸುತ್ತ ಹೆಣೆದಿರುವ ಕೌಟುಂಬಿಕ ಭಾವನೆಗಳು ಈ ಧಾರಾವಾಹಿಯ ವಿಶೇಷತೆ. ಈ ಕಥೆ ಖಂಡಿತವಾಗಿಯೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ ಎಂಬ ವಿಶ್ವಾಸ ನಮಗಿದೆ. ‘ಗೌರಿಪುತ್ರ’ ಧಾರಾವಾಹಿಗೆ ಕನ್ನಡಿಗರ ಪ್ರೀತಿ, ಪ್ರೋತ್ಸಾಹ ಮತ್ತು ಹಾರೈಕೆ ಸದಾ ಇರಲಿ ಎಂದು ಆಶಿಸುತ್ತೇವೆ,” ಎಂದರು.
ತಾಯಿಯ ಕಣ್ಣಲ್ಲಿ ಮತ್ತೆ ಸಂತೋಷದ ಬೆಳಕು ಮೂಡಿಸಲು ಹೊರಟ ಕಾರ್ತಿಕ್ನ ಪ್ರಯತ್ನಕ್ಕೆ ಯಾವೆಲ್ಲಾ ಅಡೆತಡೆಗಳು ಎದುರಾಗಲಿವೆ? ತಾಯಿಯ ಬಹುದಿನಗಳ ಕನಸು ನನಸಾಗಲಿದೆಯೇ? ಎಂಬುದನ್ನು ತಿಳಿಯಲು ತಪ್ಪದೆ ವೀಕ್ಷಿಸಿ ‘ಗೌರಿಪುತ್ರ’ – ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ, ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ!
City Today News 9341997936

You must be logged in to post a comment.