ದುನಿಯಾ ವಿಜಯ್ vs ರಾಜ್ ಬಿ. ಶೆಟ್ಟಿ: ‘ಲ್ಯಾಂಡ್ ಲಾರ್ಡ್’ನಲ್ಲಿ ರೋಚಕ ಸಂಘರ್ಷ

ಸ್ಯಾಂಡಲ್‌ವುಡ್‌ನ ಸಲಗ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ‘ಲ್ಯಾಂಡ್ ಲಾರ್ಡ್’ ಸಿನಿಮಾ ಇದೇ ಶನಿವಾರ ಸಂಜೆ 4 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಿಭಿನ್ನ ಧಾರಾವಾಹಿಗಳು, ಮನರಂಜನಾ ಕಾರ್ಯಕ್ರಮಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ಸದಾ ವೀಕ್ಷಕರ ಮನ ಗೆದ್ದಿರುವ ಜೀ ಕನ್ನಡ, ಇದೀಗ ಮತ್ತೊಮ್ಮೆ ಪ್ರೇಕ್ಷಕರಿಗೆ ಶಕ್ತಿಶಾಲಿ ಸಾಮಾಜಿಕ ಕಥಾಹಂದರ ಹೊಂದಿದ ಚಿತ್ರವನ್ನು ನೀಡಲು ಸಜ್ಜಾಗಿದೆ.

1980ರ ದಶಕದ ಗ್ರಾಮೀಣ ಹಿನ್ನೆಲೆಯಲ್ಲಿನ ‘ಲ್ಯಾಂಡ್ ಲಾರ್ಡ್’ ಸಿನಿಮಾ ಆತ್ಮಗೌರವ, ನ್ಯಾಯ, ದಬ್ಬಾಳಿಕೆ ಮತ್ತು ಪ್ರತಿರೋಧದ ಕಥೆಯನ್ನು ತೀವ್ರವಾಗಿ ಅನಾವರಣಗೊಳಿಸುತ್ತದೆ. ಸಮಾಜದಲ್ಲಿನ ಜಾತಿ ಅಸಮಾನತೆ, ಬಡವರ ಮೇಲಿನ ಶೋಷಣೆ ಹಾಗೂ ಅಧಿಕಾರದ ದುರುಪಯೋಗವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದ್ದು, ಅನ್ಯಾಯದ ವಿರುದ್ಧ ಸಾಮಾನ್ಯ ಜನರು ಒಂದಾಗಿ ಹೋರಾಡಿದಾಗ ಮೂಡುವ ಶಕ್ತಿಯೇ ಚಿತ್ರದ ಕೇಂದ್ರಬಿಂದು.

ಚಿತ್ರದಲ್ಲಿ ರಾಚಯ್ಯನಾಗಿ ಕಾಣಿಸಿಕೊಂಡಿರುವ ದುನಿಯಾ ವಿಜಯ್, ತನ್ನ ಪತ್ನಿ ನಿಂಗವ್ವ (ರಚಿತಾ ರಾಮ್) ಮತ್ತು ಮಗಳು ಭಾಗ್ಯಾಳೊಂದಿಗೆ ಶಾಂತ ಜೀವನ ನಡೆಸುವ ಕನಸಿನಲ್ಲಿರುವ ಸಾಮಾನ್ಯ ರೈತನ ಪಾತ್ರದಲ್ಲಿ ನಟಿಸಿದ್ದಾರೆ. ತನ್ನದೇ ಆದ ಒಂದು ಸಣ್ಣ ಜಮೀನು ಹೊಂದಬೇಕೆಂಬ ಕನಸಿನೊಂದಿಗೆ ಬದುಕುತ್ತಿರುವ ರಾಚಯ್ಯನ ಜೀವನಕ್ಕೆ ಗ್ರಾಮವನ್ನು ಆಳುವ ಪ್ರಭಾವಿ ಜಮೀನುದಾರ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ಅಡ್ಡಿಯಾಗುತ್ತಾನೆ. ಜಮೀನು, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆಯೂ ಹಿಡಿತ ಹೊಂದಿರುವ ಸಣ್ಣ ಧಣಿಯ ದಬ್ಬಾಳಿಕೆಯಿಂದ ಗ್ರಾಮಸ್ಥರು ಅನುಭವಿಸುವ ಹಿಂಸೆ ಮತ್ತು ಭಯ ರಾಚಯ್ಯನ ಮನಸ್ಸನ್ನು ಕಲುಕುತ್ತದೆ.

ನ್ಯಾಯದ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ರಾಚಯ್ಯ, ಒಂದು ನಿರಪರಾಧಿ ಕುಟುಂಬದ ದಾರುಣ ಸಾವಿನ ಬಳಿಕ ಮೌನ ಮುರಿದು ಅನ್ಯಾಯದ ವಿರುದ್ಧ ಹೋರಾಡುವ ನಾಯಕನಾಗಿ ರೂಪಾಂತರಗೊಳ್ಳುತ್ತಾನೆ. ದುನಿಯಾ ವಿಜಯ್ ಅವರ ಗಂಭೀರ ಅಭಿನಯ, ರಚಿತಾ ರಾಮ್ ಅವರ ಮನಮುಟ್ಟುವ ಪಾತ್ರ ನಿರ್ವಹಣೆ ಹಾಗೂ ಸಣ್ಣ ಧಣಿಯಾಗಿ ರಾಜ್ ಬಿ. ಶೆಟ್ಟಿ ನೀಡಿರುವ ಪ್ರಭಾವಿ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ರಾಚಯ್ಯ ಮತ್ತು ಗ್ರಾಮಸ್ಥರು ಸಣ್ಣ ಧಣಿಯ ದಬ್ಬಾಳಿಕೆಗೆ ಅಂತ್ಯ ಹಾಡಲು ಸಾಧ್ಯವಾಗುತ್ತದೆಯೇ? ನ್ಯಾಯದ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ತಪ್ಪದೇ ವೀಕ್ಷಿಸಿ ‘ಲ್ಯಾಂಡ್ ಲಾರ್ಡ್’-ಇದೇ ಶನಿವಾರ ಸಂಜೆ 4 ಗಂಟೆಗೆ, ಕೇವಲ ಜೀ ಕನ್ನಡ ವಾಹಿನಿಯಲ್ಲಿ.

City Today News 9341997936