ಸಿದ್ದರಾಮಯ್ಯ ಸರ್ಕಾರಕ್ಕೆ ಮುಸ್ಲಿಂ ಒಕ್ಕೂಟದ ನೇರ ಪ್ರಶ್ನೆ

ಬೆಂಗಳೂರು, ಮೇ 14: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಭರವಸೆಗಳು ಸಮರ್ಪಕವಾಗಿ ಈಡೇರಿಲ್ಲ ಎಂಬ ಆರೋಪದ ನಡುವೆ, ಈ ವಿಚಾರಗಳನ್ನು ಚರ್ಚಿಸಿ ಮುಂದಿನ ಹೋರಾಟದ ದಿಕ್ಕು ನಿರ್ಧರಿಸಲು “ಕರ್ನಾಟಕ ಮುಸ್ಲಿಂ ಸಮಾವೇಶ”ವನ್ನು ಇದೇ ಮೇ 16ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ “ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ”, ಉಲೇಮಾ ಗುರುಗಳು ಹಾಗೂ ಕೆಆರ್‌ಎಂಒ ಮುಖಂಡರು ಮಾಹಿತಿ ನೀಡಿದರು.

ಸಮಾವೇಶದಲ್ಲಿ “ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಭರವಸೆಗಳು, ಅವುಗಳ ಅನುಷ್ಠಾನದ ಸ್ಥಿತಿ, ಈಡೇರದ ಬೇಡಿಕೆಗಳು ಹಾಗೂ ಸಮುದಾಯದ ಮುಂದಿನ ನಡೆ ಕುರಿತ ಸಮಗ್ರ ಚರ್ಚೆ ನಡೆಯಲಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಮುದಾಯದ ನಾಯಕರು, ಧಾರ್ಮಿಕ ಗುರುಗಳು ಹಾಗೂ ಹಿತಚಿಂತಕರು ಭಾಗವಹಿಸಲಿದ್ದು, ಮುಸ್ಲಿಂ ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳು ಮತ್ತು ಸರ್ಕಾರದ ಗಮನಕ್ಕೆ ತರಬೇಕಾದ ಪ್ರಮುಖ ವಿಷಯಗಳ ಪಟ್ಟಿ ಸಿದ್ಧಪಡಿಸಲಾಗುವುದು. ಬಳಿಕ ಆ ವರದಿಯನ್ನು ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಸಲ್ಲಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಮೇ 16ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಸಮಾವೇಶದಲ್ಲಿ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳ ಕುರಿತು ಚರ್ಚೆ ನಡೆಯಲಿದ್ದು, ಸರ್ಕಾರದ ವಿರುದ್ಧದ ಅಸಮಾಧಾನ ಮತ್ತು ಮುಂದಿನ ಹೋರಾಟದ ರೂಪು ರೇಷೆಗಳಿಗೂ ಅಂತಿಮ ಸ್ಪರ್ಶ ನೀಡಲಾಗುವುದು ಎಂದು ಮುಖಂಡರು ತಿಳಿಸಿದರು.

City Today News 9341997936