ಬೆಂಗಳೂರು, ಜುಲೈ 16: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ನಟ, ಸ್ಟಂಟ್ ನಿರ್ದೇಶಕ, ನಿರ್ಮಾಪಕ ಹಾಗೂ ಮಿಸ್ಟಿಕಲ್ ರೋಸ್ ವಿಷುಯಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಇಒ ಡಾ. ಯೂನಾಸ್ ಜೋನ್ಸ್ ಅವರನ್ನು ಕಲೆ ಮತ್ತು ಕ್ರೈಸ್ತ ಅಲ್ಪಸಂಖ್ಯಾತ ವರ್ಗದ ಕೋಟಾದಡಿ ವಿಧಾನ ಪರಿಷತ್ ಸದಸ್ಯರಾಗಿ (ಎಂಎಲ್‌ಸಿ) ನಾಮನಿರ್ದೇಶನ ಮಾಡಬೇಕೆಂದು ಕಾಂಗ್ರೆಸ್ ಮುಖಂಡರ ನಿಯೋಗವು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿತು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಭೇಟಿಯ ವೇಳೆ ಕೆಪಿಸಿಸಿ ಕಾರ್ಯದರ್ಶಿ ನಾಥನ್ ಡೇನಿಯಲ್, ಬೆಂಗಳೂರು ಕೇಂದ್ರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಮಿಸ್ ಶಾಂತ ಕುಮಾರಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಈ ಬೇಡಿಕೆಯನ್ನು ಮುಂದಿಟ್ಟರು.

ಡಾ. ಯೂನಾಸ್ ಜೋನ್ಸ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಕ್ರೈಸ್ತ ಸಮುದಾಯದ ಪ್ರಮುಖ ಮುಖಂಡರಾಗಿ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜಕೀಯದ ಜೊತೆಗೆ ಕಲೆ, ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಇಂತಹ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡುವುದು ನ್ಯಾಯಸಮ್ಮತ ಹಾಗೂ ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ನಿರ್ಧಾರವಾಗಲಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿತು.
ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಡಾ. ಯೂನಾಸ್ ಜೋನ್ಸ್ ಅವರಿಗೆ ಈ ಬಾರಿ ಅವಕಾಶ ಕಲ್ಪಿಸಬೇಕೆಂದು ಮುಖಂಡರು ಆಗ್ರಹಿಸಿದರು. ಪಕ್ಷಕ್ಕಾಗಿ ದೀರ್ಘಕಾಲದಿಂದ ಶ್ರಮಿಸುತ್ತಿರುವ ನಿಷ್ಠಾವಂತ ನಾಯಕರಿಗೆ ಸೂಕ್ತ ಗೌರವ ಮತ್ತು ರಾಜಕೀಯ ಅವಕಾಶ ದೊರೆಯಬೇಕು. ಅಂತಹ ನಾಯಕರನ್ನು ನಿರ್ಲಕ್ಷಿಸಿದರೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದ್ದು, ಅದು ಪಕ್ಷದ ಸಂಘಟನೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಡಾ. ಯೂನಾಸ್ ಜೋನ್ಸ್ ಅವರ ಸೇವೆ, ಅನುಭವ ಮತ್ತು ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ, ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡುವಂತೆ ನಿಯೋಗವು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿತು.
City Today News 9341997936

You must be logged in to post a comment.