ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹170 ಕೋಟಿ ವೇತನ ಹಿಂಬಾಕಿ ಬಿಡುಗಡೆ: ಭೈರತಿ ಸುರೇಶ್

ಬೆಂಗಳೂರು, ಆ.14: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗಾಗಿ ₹170 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರೊಂದಿಗೆ ಶುಕ್ರವಾರ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂಬಂಧ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದು ಸಚಿವರು ತಿಳಿಸಿದರು.

ಕಾರ್ಮಿಕ ಸಂಘಟನೆಗಳ ವಿವಿಧ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದ್ದು, ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಿಧಾನಸಭಾ ಅಧಿವೇಶನ ಮುಕ್ತಾಯಗೊಂಡ ಬಳಿಕ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು. ಬೇಡಿಕೆಗಳನ್ನು ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭೈರತಿ ಸುರೇಶ್ ಭರವಸೆ ನೀಡಿದರು.

ಹಿಂಬಾಕಿ ವೇತನದ ಮೊತ್ತವನ್ನು ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿದ ಜಂಟಿ ಕ್ರಿಯಾ ಸಮಿತಿ ಮುಖಂಡರು, ಬಾಕಿ ಉಳಿದಿರುವ ಸಂಪೂರ್ಣ ಹಿಂಬಾಕಿ ವೇತನವನ್ನೂ ಕೂಡಲೇ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ನಾಲ್ಕು ವರ್ಷಗಳ ವೇತನ ಪರಿಷ್ಕರಣೆ ಮಾಡಬೇಕು, ಪ್ರಸ್ತುತ ಶೇ.12.5ರಷ್ಟು ನಿಗದಿಪಡಿಸಿರುವ ವೇತನ ಹೆಚ್ಚಳವನ್ನು ಶೇ.15ರಿಂದ ಶೇ.20ರೊಳಗೆ ಹೆಚ್ಚಿಸಬೇಕು ಹಾಗೂ ಘೋಷಣೆಯಾಗದೆ ಉಳಿದಿರುವ 12 ತಿಂಗಳ ಹಿಂಬಾಕಿ ವೇತನವನ್ನೂ ಬಿಡುಗಡೆ ಮಾಡಬೇಕು ಎಂದು ಸಂಘಟನೆಗಳು ಆಗ್ರಹಿಸಿದವು.

ಈಗಾಗಲೇ ಮಂಜೂರಾಗಿರುವ ₹1,272 ಕೋಟಿ ಹಿಂಬಾಕಿ ವೇತನದಲ್ಲಿ ₹450 ಕೋಟಿಯನ್ನು ನೌಕರರಿಗೆ ಪಾವತಿಸಲಾಗಿದೆ. ಉಳಿದ ಮೊತ್ತವನ್ನೂ ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ, ಸಾರಿಗೆ ಇಲಾಖೆ, ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಂಟಿ ಕ್ರಿಯಾ ಸಮಿತಿ ಸದಸ್ಯರಾದ ಬಿ. ಜಯದೇವರಾಜೇ ಅರಸು, ಜ್ಯೋತಿ ಅನಂತಸುಬ್ಬರಾವ್, ಎಚ್.ಡಿ. ರೇವಪ್ಪ, ಗಂಡಸಿ ಸದಾನಂದಸ್ವಾಮಿ, ದೇವರಾಜ ಅರಸು ಹಾಗೂ ರಾಜೇಂದ್ರಗೌಡ ಜಿ.ಕೆ. ಸಭೆಯಲ್ಲಿ ಭಾಗವಹಿಸಿದ್ದರು.

City Today News 9341997936