ಶ್ರೀಗಂಧ ಬೆಳೆಗಾರರ ಹಿತ ರಕ್ಷಣೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಲು ಆಗ್ರಹ

ಶ್ರೀಗಂಧ ಬೆಳೆಎಸ್.ಎಂ. ಕೃಷ್ಣ ಸ್ಮರಣಾರ್ಥ ನವೆಂಬರ್ 29ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಶ್ರೀಗಂಧ ಸಮಾವೇಶ – ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ 18 ಪ್ರಮುಖ ಬೇಡಿಕೆಗಳ ಮಂಡನೆ

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ದಿವಂಗತ ಎಸ್.ಎಂ. ಕೃಷ್ಣ ಅವರ ಸ್ಮರಣಾರ್ಥ ರಾಷ್ಟ್ರೀಯ ಶ್ರೀಗಂಧ ಸಮಾವೇಶ-2026 ಅನ್ನು ನವೆಂಬರ್ 29ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ದೇಶದ ವಿವಿಧ ಭಾಗಗಳ ಶ್ರೀಗಂಧ ಬೆಳೆಗಾರರು, ಸಂಸ್ಕರಣಾ ಉದ್ಯಮಿಗಳು, ಮಾರುಕಟ್ಟೆದಾರರು, ರಫ್ತುದಾರರು, ಸಂಶೋಧಕರು ಹಾಗೂ ಸಂಬಂಧಿತ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಸಮಾವೇಶವನ್ನು ಉದ್ಘಾಟಿಸಲಿದ್ದು, ತರಳಬಾಳು, ಆದಿಚುಂಚನಗಿರಿ ಹಾಗೂ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಅರಣ್ಯ, ಗೃಹ, ಕೃಷಿ ಮತ್ತು ತೋಟಗಾರಿಕೆ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಈ ಸಮಾವೇಶವು ಕೇವಲ ಶ್ರೀಗಂಧದ ಕುರಿತು ಚರ್ಚಿಸುವ ವಿಚಾರ ಸಂಕಿರಣವಾಗಿರದೆ, ರೈತರು ಬೆಳೆಸುವ ಶ್ರೀಗಂಧವನ್ನು ಮೌಲ್ಯಯುತ ಕೃಷಿ ಉತ್ಪನ್ನವೆಂದು ಗುರುತಿಸಿ, ಅದರ ಉತ್ಪಾದನೆಯಿಂದ ಹಿಡಿದು ಸಂಸ್ಕರಣೆ, ಮಾರುಕಟ್ಟೆ ಮತ್ತು ಜಾಗತಿಕ ರಫ್ತಿನವರೆಗೆ ಸಮಗ್ರ ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಸರ್ಕಾರದ ಗಮನ ಸೆಳೆಯುವ ಮಹತ್ವದ ವೇದಿಕೆಯಾಗಲಿದೆ.

ಖಾಸಗಿ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆಸುವ ರೈತರನ್ನು ಅದರ ನಿಜವಾದ ಮಾಲೀಕರನ್ನಾಗಿ ಗುರುತಿಸಿ, ಅವರಿಗೆ ಸೂಕ್ತ ಸ್ವಾತಂತ್ರ್ಯ ಮತ್ತು ಪ್ರೋತ್ಸಾಹ ನೀಡಬೇಕು ಎಂಬ ದೂರದೃಷ್ಟಿಯ ಚಿಂತನೆ ಹೊಂದಿದ್ದ ಎಸ್.ಎಂ. ಕೃಷ್ಣ ಅವರ ಕೊಡುಗೆಯನ್ನು ಸ್ಮರಿಸುವುದೂ ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

ಕೇಂದ್ರ ಸರ್ಕಾರವು 2026-27ನೇ ಸಾಲಿನ ಬಜೆಟ್‌ನಲ್ಲಿ ಶ್ರೀಗಂಧವನ್ನು ಹೆಚ್ಚಿನ ಮೌಲ್ಯದ ಕೃಷಿ ಉತ್ಪನ್ನವೆಂದು ಗುರುತಿಸಿದ್ದು, ಶ್ರೀಗಂಧದ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಶ್ರೀಗಂಧ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ಅಗತ್ಯವಿದೆ.

ಸಮಾವೇಶದ ಪ್ರಮುಖ ಕಾರ್ಯಕ್ರಮಗಳು

ಸಮಾವೇಶದಲ್ಲಿ ಡಾ. ಗೀಮೆನ್ ತೋರ್ ಅವರ ಶ್ರೀಗಂಧ ಎಣ್ಣೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ-2026ರ ವರದಿಯನ್ನು ಬಿಡುಗಡೆ ಮಾಡಲಾಗುವುದು. ಶ್ರೀಗಂಧ ಬೆಳೆಗಾರರು, ಮೌಲ್ಯವರ್ಧಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಗುವುದು.

ಶ್ರೀಗಂಧ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಆರು ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೆ, ಸರ್ಕಾರಿ ಅಧಿಕಾರಿಗಳು, ಶ್ರೀಗಂಧ ಬೆಳೆಗಾರರು, ತಜ್ಞರು, ಮಾರುಕಟ್ಟೆದಾರರು ಮತ್ತು ಸಂಸ್ಕರಣಾ ಉದ್ಯಮಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಸಮಾವೇಶದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸಿ, ಅವುಗಳ ಅನುಷ್ಠಾನಕ್ಕಾಗಿ ನಿರಂತರವಾಗಿ ಅನುಸರಣೆ ನಡೆಸಲು ಸಂಘಟಕರು ತೀರ್ಮಾನಿಸಿದ್ದಾರೆ.

ಶ್ರೀಗಂಧ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು

ಭಾರತದಲ್ಲಿ ಶ್ರೀಗಂಧಕ್ಕೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದರೂ, ಅದರ ಉತ್ಪಾದನೆ ಮತ್ತು ವಾಣಿಜ್ಯ ಸರಪಳಿಯಲ್ಲಿ ಹಲವು ಕಾನೂನು, ನಿಯಂತ್ರಣ ಹಾಗೂ ಮಾರುಕಟ್ಟೆ ಸಂಬಂಧಿತ ಸಮಸ್ಯೆಗಳು ಮುಂದುವರಿದಿವೆ.

ಪ್ರಮುಖವಾಗಿ ರೈತರು ಬೆಳೆಸಿದ ಶ್ರೀಗಂಧದ ಕಾನೂನುಬದ್ಧ ಸ್ಥಾನಮಾನದ ಸ್ಪಷ್ಟತೆಯ ಕೊರತೆ, ಮರಗಳ ನೋಂದಣಿ, ಕಟಾವು ಮತ್ತು ಸಾಗಾಣಿಕೆಗೆ ಸಂಬಂಧಿಸಿದ ಸಂಕೀರ್ಣ ಪ್ರಕ್ರಿಯೆಗಳು, ಶ್ರೀಗಂಧ ಕಳ್ಳತನ ಹಾಗೂ ಅಕ್ರಮ ವ್ಯಾಪಾರ, ಪಾರದರ್ಶಕ ಬೆಲೆ ನಿರ್ಧಾರ ವ್ಯವಸ್ಥೆಯ ಕೊರತೆ, ಸಂಸ್ಕರಣಾ ಉದ್ಯಮದ ಮೇಲಿನ ನಿರ್ಬಂಧಗಳು ಮತ್ತು ರಫ್ತು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು ಕ್ಷೇತ್ರದ ಪ್ರಮುಖ ಸವಾಲುಗಳಾಗಿವೆ.

ವಿಶೇಷವಾಗಿ ಶ್ರೀಗಂಧದ ತವರುನಾಡು ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದಲ್ಲಿ ಈ ಸಮಸ್ಯೆಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಕರ್ನಾಟಕ ಸರ್ಕಾರ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು

ಶ್ರೀಗಂಧವನ್ನು ಕೃಷಿ ಮತ್ತು ತೋಟಗಾರಿಕಾ ಬೆಳೆಯಾಗಿ ಗುರುತಿಸಿ, ತೋಟಗಾರಿಕೆ ಇಲಾಖೆಯ ಮೂಲಕ ಮೌಲ್ಯಯುತ ವೃಕ್ಷಾಧಾರಿತ ಕೃಷಿಯಾಗಿ ಉತ್ತೇಜಿಸುವ ನೀತಿಯನ್ನು ರೂಪಿಸಬೇಕು.

ಖಾಸಗಿ ಜಮೀನಿನಲ್ಲಿ ರೈತರು ಬೆಳೆಸಿದ ಶ್ರೀಗಂಧದ ಮರಗಳನ್ನು ಕಟಾವು ಮಾಡಲು, ಸಾಗಿಸಲು ಮತ್ತು ಮಾರಾಟ ಮಾಡಲು ಇರುವ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು. ಶ್ರೀಗಂಧ ಕಳ್ಳತನವನ್ನು ಕೇವಲ ಅರಣ್ಯ ಅಪರಾಧವೆಂದು ಪರಿಗಣಿಸದೆ, ಸಂಘಟಿತ ಅಪರಾಧ ಮತ್ತು ಅಕ್ರಮ ಮಾರುಕಟ್ಟೆ ಜಾಲದೊಂದಿಗೆ ಸಂಪರ್ಕ ಕಲ್ಪಿಸಿ ತನಿಖೆ ನಡೆಸಲು ವಿಶೇಷ ಪೊಲೀಸ್ ವ್ಯವಸ್ಥೆ ರೂಪಿಸಬೇಕು.

ಕಳ್ಳತನದಿಂದ ಮರಗಳನ್ನು ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಪರಿಹಾರ ಹಾಗೂ ವಿಮಾ ಸೌಲಭ್ಯ ಒದಗಿಸಬೇಕು. ಭೂಸ್ವಾಧೀನ ಸಂದರ್ಭದಲ್ಲಿ ಖಾಸಗಿ ಜಮೀನಿನಲ್ಲಿರುವ ಶ್ರೀಗಂಧದ ಮರಗಳಿಗೆ ತೋಟಗಾರಿಕೆ ಇಲಾಖೆಯ ಮೂಲಕ ವೈಜ್ಞಾನಿಕ ಮೌಲ್ಯಮಾಪನ ನಡೆಸಿ ಸೂಕ್ತ ಪರಿಹಾರ ನೀಡಬೇಕು.

ನೋಂದಣಿ, ಕಟಾವು, ಸಾಗಾಣಿಕೆ, ಮಾರಾಟ, ಸಂಸ್ಕರಣೆ ಮತ್ತು ರಫ್ತಿಗೆ ಸಂಬಂಧಿಸಿದ ಎಲ್ಲ ಅನುಮತಿಗಳನ್ನು ಒಂದೇ ಸೂರಿನಡಿ ಒದಗಿಸುವ ಡಿಜಿಟಲ್ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು.

ಇ-ಕ್ರಾಪ್ ವ್ಯವಸ್ಥೆಯಡಿ ರೈತರು ಬೆಳೆಸುವ ಶ್ರೀಗಂಧದ ಮರಗಳ ಸ್ಥಳ, ಸಂಖ್ಯೆ, ವಯಸ್ಸು ಮತ್ತು ಇತರ ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಬೇಕು. ಸರ್ಕಾರದ ಡಿಪೋಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಕಾನೂನುಬದ್ಧವಾಗಿ ಬೆಳೆದ ಶ್ರೀಗಂಧವನ್ನು ಮಾನ್ಯತೆ ಪಡೆದ ಖಾಸಗಿ ಖರೀದಿದಾರರು ಮತ್ತು ಸಂಸ್ಕರಣಾ ಉದ್ಯಮಿಗಳಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು.

ಮರದ ಗುಣಮಟ್ಟ, ಹಾರ್ಟ್‌ವುಡ್ ಪ್ರಮಾಣ ಹಾಗೂ ಶ್ರೀಗಂಧದ ಎಣ್ಣೆಯ ಇಳುವರಿಯನ್ನು ಆಧರಿಸಿ ವೈಜ್ಞಾನಿಕ ಶ್ರೇಣೀಕರಣ ಮತ್ತು ಪಾರದರ್ಶಕ ಬೆಲೆ ನಿರ್ಧಾರ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ 18 ಪ್ರಮುಖ ಬೇಡಿಕೆಗಳು

ರಾಷ್ಟ್ರೀಯ ಶ್ರೀಗಂಧ ಸಮಾವೇಶದ ಮೂಲಕ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ಮುಂದೆ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮಂಡಿಸಲು ನಿರ್ಧರಿಸಲಾಗಿದೆ.

1. ಅರಣ್ಯ ಕಾಯ್ದೆಗೆ ತಿದ್ದುಪಡಿ: ಭಾರತೀಯ ಅರಣ್ಯ ಕಾಯ್ದೆ-1927ಕ್ಕೆ ಸೂಕ್ತ ತಿದ್ದುಪಡಿ ತಂದು, ರೈತರು ಕೃಷಿ ಭೂಮಿಯಲ್ಲಿ ಬೆಳೆಸಿದ ಶ್ರೀಗಂಧವನ್ನು ಅರಣ್ಯ ಉತ್ಪನ್ನಗಳ ವ್ಯಾಪ್ತಿಯಿಂದ ಪ್ರತ್ಯೇಕಿಸಬೇಕು.

2. ಕೃಷಿ ಉತ್ಪನ್ನದ ಮಾನ್ಯತೆ: ರೈತರು ಬೆಳೆಸಿದ ಶ್ರೀಗಂಧವನ್ನು ಸ್ಪಷ್ಟವಾಗಿ ತೋಟಗಾರಿಕಾ ಉತ್ಪನ್ನ ಅಥವಾ ಕೃಷಿ ಉತ್ಪನ್ನವೆಂದು ಗುರುತಿಸಬೇಕು.

3. ಸಮಗ್ರ ಅಭಿವೃದ್ಧಿ: ಶ್ರೀಗಂಧ ಕೃಷಿಯನ್ನು ಒಂದೇ ಸೂರಿನಡಿ ತಂದು, ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್ ಹಾಗೂ ಇತರ ಸರ್ಕಾರಿ ಯೋಜನೆಗಳೊಂದಿಗೆ ಸಂಯೋಜಿಸಬೇಕು.

4. ತೋಟಗಾರಿಕೆ ಇಲಾಖೆಯ ಪಾತ್ರ: ಶ್ರೀಗಂಧ ಕೃಷಿಯ ಅಭಿವೃದ್ಧಿ, ಪ್ರೋತ್ಸಾಹ ಮತ್ತು ನಿರ್ವಹಣೆಯಲ್ಲಿ ತೋಟಗಾರಿಕೆ ಇಲಾಖೆಗೆ ಪ್ರಮುಖ ಜವಾಬ್ದಾರಿ ನೀಡಬೇಕು.

5. ವೃಕ್ಷಾಧಾರಿತ ಕೃಷಿಗೆ ಉತ್ತೇಜನ: ಮರ ಆಧಾರಿತ ಕೃಷಿ ನೀತಿಯಡಿ ಶ್ರೀಗಂಧವನ್ನು ಪ್ರಮುಖ ಹೆಚ್ಚಿನ ಮೌಲ್ಯದ ಕೃಷಿ ಬೆಳೆಯಾಗಿ ಗುರುತಿಸಿ, ಕೇಂದ್ರ ಸರ್ಕಾರದ ನೀತಿಯನ್ನು ರಾಜ್ಯದಲ್ಲಿಯೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

6. ಡಿಜಿಟಲ್ ನೋಂದಣಿ: ದೇಶಾದ್ಯಂತ ಕಾನೂನುಬದ್ಧವಾಗಿ ಬೆಳೆದ ಶ್ರೀಗಂಧದ ಮರಗಳ ಇ-ಕ್ರಾಪ್ ಅಥವಾ ಡಿಜಿಟಲ್ ನೋಂದಣಿ ವ್ಯವಸ್ಥೆ ಜಾರಿಗೆ ತರಬೇಕು.

7. ಕೇಂದ್ರ ಶ್ರೀಗಂಧ ಅಭಿವೃದ್ಧಿ ಮಂಡಳಿ: ಬೆಂಗಳೂರಿನಲ್ಲಿ ಕೇಂದ್ರ ಶ್ರೀಗಂಧ ಅಭಿವೃದ್ಧಿ ಮಂಡಳಿ (Central Sandalwood Development Board) ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒತ್ತಾಯಿಸಬೇಕು.

8. ಎಸ್.ಎಂ. ಕೃಷ್ಣ ಕರ್ನಾಟಕ ಶ್ರೀಗಂಧ ಅಭಿವೃದ್ಧಿ ಮಂಡಳಿ: ಶ್ರೀಗಂಧ ಬೆಳೆಗಾರರ ಹಿತಾಸಕ್ತಿ ರಕ್ಷಣೆ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಎಸ್.ಎಂ. ಕೃಷ್ಣ ಕರ್ನಾಟಕ ಶ್ರೀಗಂಧ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ರೈತರಿಗೆ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಬೇಕು.

9. ನೇರ ಮಾರುಕಟ್ಟೆ ವ್ಯವಸ್ಥೆ: ರೈತರು, ಸಂಸ್ಕರಣಾ ಉದ್ಯಮಿಗಳು, ಮಾರುಕಟ್ಟೆದಾರರು ಮತ್ತು ರಫ್ತುದಾರರ ನಡುವೆ ನೇರ ಹಾಗೂ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ರೂಪಿಸಬೇಕು.

10. ವೈಜ್ಞಾನಿಕ ಬೆಲೆ ನಿರ್ಧಾರ: ಶ್ರೀಗಂಧದ ಗುಣಮಟ್ಟ, ಹಾರ್ಟ್‌ವುಡ್ ಪ್ರಮಾಣ ಮತ್ತು ಎಣ್ಣೆಯ ಇಳುವರಿ ಆಧರಿಸಿ ವೈಜ್ಞಾನಿಕ ಶ್ರೇಣೀಕರಣ ಹಾಗೂ ಬೆಲೆ ನಿರ್ಧಾರ ವ್ಯವಸ್ಥೆ ಸ್ಥಾಪಿಸಬೇಕು.

11. ಕಳ್ಳತನ ತಡೆಗೆ ವಿಶೇಷ ತನಿಖಾ ತಂಡ: ಶ್ರೀಗಂಧ ಕಳ್ಳತನ ಮತ್ತು ಅಕ್ರಮ ಸಾಗಾಣಿಕೆ ತಡೆಗಟ್ಟಲು ವಿಶೇಷ ತನಿಖೆ ಹಾಗೂ ಜಾರಿ ವ್ಯವಸ್ಥೆ ರೂಪಿಸಬೇಕು. ಅಕ್ರಮ ಜಾಲದ ಹಿಂದಿರುವವರನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ (SIT) ರಚಿಸಬೇಕು.

12. ರಫ್ತು ಅವಕಾಶಗಳ ವಿಸ್ತರಣೆ: ಕಾನೂನುಬದ್ಧವಾಗಿ ಬೆಳೆದ ಶ್ರೀಗಂಧ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಹಂತ ಹಂತವಾಗಿ ಹೆಚ್ಚಿನ ಅವಕಾಶ ಕಲ್ಪಿಸಬೇಕು. ರೈತರ ಆದಾಯ ಮತ್ತು ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನೀತಿ ರೂಪಿಸಬೇಕು.

13. ಮೌಲ್ಯವರ್ಧಿತ ಉತ್ಪನ್ನಗಳಿಗೆ ಪ್ರೋತ್ಸಾಹ: ಶ್ರೀಗಂಧದ ಎಣ್ಣೆ, ಸುಗಂಧ ದ್ರವ್ಯಗಳು, ಔಷಧೀಯ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಗೆ ರೈತ ಉದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು. ಈ ಚಟುವಟಿಕೆಗಳನ್ನು ಗುಡಿ ಕೈಗಾರಿಕೆಗಳ ವ್ಯಾಪ್ತಿಗೆ ತಂದು ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಬೇಕು.

14. ಸಂಶೋಧನೆ ಮತ್ತು ತಂತ್ರಜ್ಞಾನ: ಉತ್ತಮ ಗುಣಮಟ್ಟದ ನೆಡುವ ಸಾಮಗ್ರಿ, ಕ್ಲೋನಲ್ ಮತ್ತು ಸುಧಾರಿತ ಸಸಿಗಳು, ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಕೃಷಿ ಪದ್ಧತಿಗಳ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಬೇಕು.

15. ಪರಿಸರ ಮತ್ತು ಆರ್ಥಿಕ ಅಧ್ಯಯನ: ಶ್ರೀಗಂಧ ಕೃಷಿಯಿಂದ ಉಂಟಾಗುವ ಇಂಗಾಲ ಸಂಗ್ರಹಣೆ, ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ದೊರೆಯುವ ಕೊಡುಗೆ ಹಾಗೂ ರೈತರ ದೀರ್ಘಕಾಲೀನ ಆದಾಯದ ಕುರಿತು ಸಮಗ್ರ ಅಧ್ಯಯನ ನಡೆಸಬೇಕು.

16. ಸ್ಪೈಕ್ ರೋಗ ನಿಯಂತ್ರಣ: ಅರಣ್ಯ ಮತ್ತು ಕೃಷಿ ಭೂಮಿಗಳಲ್ಲಿ ಶ್ರೀಗಂಧದ ಮರಗಳಿಗೆ ತಗುಲುತ್ತಿರುವ ಸ್ಪೈಕ್ ರೋಗವನ್ನು ನಿಯಂತ್ರಿಸಲು ಪರಿಣಾಮಕಾರಿ ಸಂಶೋಧನೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.

17. ಸಾಲ ಮತ್ತು ವಿಮೆ ಸೌಲಭ್ಯ: ಶ್ರೀಗಂಧ ಕೃಷಿಯನ್ನು ಸಮಗ್ರ ಕೃಷಿ ಪದ್ಧತಿಯ ಭಾಗವಾಗಿ ಗುರುತಿಸಿ, ಬೆಳೆಗಾರರಿಗೆ ಬ್ಯಾಂಕ್ ಸಾಲ, ವಿಮೆ ಮತ್ತು ಇತರ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕು.

18. ಶ್ರೀಗಂಧ ಅಭಿವೃದ್ಧಿ ಸಮಿತಿ ಶಿಫಾರಸುಗಳ ಜಾರಿ: ಶ್ರೀಗಂಧ ಅಭಿವೃದ್ಧಿ ಸಮಿತಿಯ ಶಿಫಾರಸುಗಳನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಬೇಕು.

ವಿವಿಧ ಸಂಸ್ಥೆಗಳ ಸಹಕಾರ

ಈ ರಾಷ್ಟ್ರೀಯ ಸಮಾವೇಶಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ, ಹಟ್ಟಿ ಚಿನ್ನದ ಗಣಿ, ವಿಜಯ ಕರ್ನಾಟಕ ದಿನಪತ್ರಿಕೆ (ಟೈಮ್ಸ್ ಗ್ರೂಪ್), ಉದಯಕಾಲ ದಿನಪತ್ರಿಕೆ, ಕರ್ನಾಟಕ ಹಾಲು ಒಕ್ಕೂಟ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಸ್ಯಾಂಡಲ್‌ವುಡ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ವಿಸೆನ್ಸ್ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳು ಸಹಕಾರ ನೀಡಿವೆ.

ಸಮಾವೇಶದಲ್ಲಿ ಮಂಡಿಸಲಿರುವ ಬೇಡಿಕೆಗಳು ಮತ್ತು ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ, ಅವುಗಳ ಅನುಷ್ಠಾನವಾಗುವವರೆಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸೂಕ್ತ ಕ್ರಮಗಳಿಗೆ ಒತ್ತಡ ಹೇರಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಶ್ರೀಗಂಧ: ಕರ್ನಾಟಕದ ಪರಂಪರೆಯಿಂದ ಭಾರತದ ಆರ್ಥಿಕ ಅವಕಾಶದತ್ತ

ಕರ್ನಾಟಕದ ಶ್ರೀಗಂಧದ ಪರಂಪರೆ ಕೇವಲ ಅರಣ್ಯ ಸಂಪತ್ತಿನ ಇತಿಹಾಸವಲ್ಲ. ಇದು ರೈತರು, ಕರಕುಶಲಗಾರರು, ಸಂಸ್ಕರಣಾ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಸಂಶೋಧಕರನ್ನು ಒಳಗೊಂಡಿರುವ ಮಹತ್ವದ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯಾಗಿದೆ.

ಆದ್ದರಿಂದ, ರೈತರನ್ನು ನಿಯಂತ್ರಿಸುವ ಶ್ರೀಗಂಧ ನೀತಿಯ ಬದಲಾಗಿ ರೈತರನ್ನು ಪ್ರೋತ್ಸಾಹಿಸುವ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಹೊಸ ನೀತಿಯನ್ನು ರೂಪಿಸಬೇಕಿದೆ. ರೈತರು ತಮ್ಮ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆಸುವುದರಿಂದ ನೈಸರ್ಗಿಕ ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಕಾಲೀನ ಆದಾಯ, ಉದ್ಯೋಗಾವಕಾಶ ಮತ್ತು ಹಸಿರು ಸಂಪತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಕರ್ನಾಟಕದ ಮಳೆಆಧಾರಿತ ಕೃಷಿ ಪ್ರದೇಶಗಳಲ್ಲಿಯೂ ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗೆ ಅನುಗುಣವಾಗಿ ವೃಕ್ಷಾಧಾರಿತ ಕೃಷಿಯನ್ನು ಉತ್ತೇಜಿಸುವ ಅವಕಾಶಗಳಿವೆ.

“ಶ್ರೀಗಂಧವನ್ನು ಉಳಿಸುವುದಷ್ಟೇ ಅಲ್ಲ, ಶ್ರೀಗಂಧವನ್ನು ಬೆಳೆಸುವ ರೈತನನ್ನೂ ಉಳಿಸಬೇಕು” ಎಂಬ ಆಶಯದೊಂದಿಗೆ ಈ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಅಮರನಾರಾಯಣ ಅವರು, ಎಸ್.ಎಂ. ಕೃಷ್ಣ ಅವರ ಸ್ಮರಣಾರ್ಥ ನಡೆಯುತ್ತಿರುವ ಈ ಸಮಾವೇಶವು ರೈತರ ಹಿತಾಸಕ್ತಿ ರಕ್ಷಣೆ, ಶ್ರೀಗಂಧ ಕ್ಷೇತ್ರದ ಪುನರುಜ್ಜೀವನ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

City Today News 9341997936