ರಾಜವೀರ ಮದಕರಿ ನಾಯಕ ಜಯಂತೋತ್ಸವ ಅದ್ಧೂರಿ ಆಚರಣೆ


ಚಿತ್ರದುರ್ಗದಲ್ಲಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು; ಯುವ ಪೀಳಿಗೆಗೆ ಮದಕರಿ ನಾಯಕ ಅವರ ಆದರ್ಶ ಪರಿಚಯಿಸುವ ಸಂಕಲ್ಪ

ಬೆಂಗಳೂರು, ಸೆ.22: ನಾಡಿನ ಸ್ವಾಭಿಮಾನ, ಧೈರ್ಯ, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿರುವ ರಾಜವೀರ ಮದಕರಿ ನಾಯಕ ಅವರ ಜಯಂತೋತ್ಸವವನ್ನು ಚಿತ್ರದುರ್ಗದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸೆ.22ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ವತಿಯಿಂದ ಜಯಂತೋತ್ಸವದ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಲಾಯಿತು.

ಚಿತ್ರದುರ್ಗ ಕೋಟೆನಾಡು ಹಾಗೂ ನೆಲದ ರಕ್ಷಣೆಗಾಗಿ ರಾಜವೀರ ಮದಕರಿ ನಾಯಕ ಅವರು ಪ್ರದರ್ಶಿಸಿದ ಸಾಹಸ, ಪರಾಕ್ರಮ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಜಯಂತೋತ್ಸವ ಆಯೋಜಿಸಲಾಗಿದೆ. ಅವರ ಆದರ್ಶಗಳು ಹಾಗೂ ಶೌರ್ಯದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಮಿತಿ ತಿಳಿಸಿದೆ.

ಜಯಂತೋತ್ಸವದ ಅಂಗವಾಗಿ ಬೆಳಗ್ಗೆ 11.30ಕ್ಕೆ ರಾಜವೀರ ಮದಕರಿ ನಾಯಕ, ಒನಕೆ ಓಬವ್ವ, ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸ, ಜಗಜ್ಯೋತಿ ಬಸವೇಶ್ವರ, ಶ್ರೀಕೃಷ್ಣ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಗುವುದು.

ಮಧ್ಯಾಹ್ನ 1.30ಕ್ಕೆ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಕನಕ ಸರ್ಕಲ್‌ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾಜವೀರ ಮದಕರಿ ನಾಯಕ ಅವರ ನೂತನ ಪ್ರತಿಮೆಯೊಂದಿಗೆ ಮೆರವಣಿಗೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ.

ಶ್ರೀ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ರಾತ್ರಿ 7.30ಕ್ಕೆ ಮದಕರಿ ಸರ್ಕಲ್‌ನಲ್ಲಿ ಧ್ವನಿ-ಬೆಳಕಿನ ಪ್ರದರ್ಶನ, ಪಟಾಕಿ ಶೋ ಹಾಗೂ ಲೇಸರ್ ಶೋ ನಡೆಯಲಿದೆ.

“ಒಗ್ಗಟ್ಟಿನಲ್ಲಿ ಶಕ್ತಿ, ಸಹಭಾಗಿತ್ವದಲ್ಲಿ ಯಶಸ್ಸು” ಎಂಬ ಆಶಯದೊಂದಿಗೆ ನಡೆಯಲಿರುವ ಜಯಂತೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ಮನವಿ ಮಾಡಿದೆ.

City Today News 9341997936