ಕರ್ನಾಟಕದಲ್ಲಿ SIR ಪ್ರಕ್ರಿಯೆ: ಲಕ್ಷಾಂತರ ಮತದಾರರ ಹಕ್ಕಿಗೆ ಆತಂಕ – ‘SIR ವಿರೋಧಿ ಕರ್ನಾಟಕ’

ಬೆಂಗಳೂರು, ಆ. 4: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ರಾಜ್ಯದಲ್ಲಿ ವ್ಯಾಪಕ ಗೊಂದಲ ಮತ್ತು ಆತಂಕ ಉಂಟಾಗಿದೆ ಎಂದು ‘SIR ವಿರೋಧಿ ಕರ್ನಾಟಕ’ ಒಕ್ಕೂಟ ಆರೋಪಿಸಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ಸುಮಾರು 1.10 ಕೋಟಿ (19.95%) ಮತದಾರರು ಡಿಲೀಷನ್ ಪಟ್ಟಿಗೆ ಸೇರಿರುವುದು ಗಂಭೀರ ಬೆಳವಣಿಗೆಯಾಗಿದ್ದು, ಬೆಂಗಳೂರಿನಲ್ಲಿ ಈ ಪ್ರಮಾಣ ಸುಮಾರು 40% ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಒಕ್ಕೂಟದ ಪ್ರಕಾರ, ಡಿಲೀಷನ್ ಪಟ್ಟಿಯಲ್ಲಿರುವ ಬಹುತೇಕರು ಮೃತಪಟ್ಟವರು ಅಥವಾ ನಕಲಿ ಮತದಾರರಲ್ಲ; ಬದಲಾಗಿ ಬೇರೆಡೆಗೆ ಸ್ಥಳಾಂತರಗೊಂಡವರು ಹಾಗೂ BLO ಮನೆಗೆ ಭೇಟಿ ನೀಡಿದ ವೇಳೆ ಮನೆಯಲ್ಲಿ ಇಲ್ಲದವರು. ಇಂತಹ ಜೀವಂತ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಅವರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದರ ಜೊತೆಗೆ 34 ಲಕ್ಷ ‘ಮ್ಯಾಪಿಂಗ್ ಆಗದ’ ಮತದಾರರು ಹಾಗೂ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ವಿಭಾಗಕ್ಕೆ ಸೇರಿದವರ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಿಲ್ಲ. ಈ ಸಾಫ್ಟ್‌ವೇರ್‌ನ ಕಾರ್ಯವಿಧಾನ, ಮಾನದಂಡಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಪಾರದರ್ಶಕತೆ ಇಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದೆ.
ಚುನಾವಣಾ ಆಯೋಗಕ್ಕೆ ಪ್ರಮುಖ ಪ್ರಶ್ನೆಗಳು
ಒಕ್ಕೂಟವು ಚುನಾವಣಾ ಆಯೋಗಕ್ಕೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ:

ಜೀವಂತವಾಗಿದ್ದು ಕೇವಲ ಸ್ಥಳಾಂತರಗೊಂಡಿರುವ ಅಥವಾ ಮನೆಗೆ ಭೇಟಿ ವೇಳೆ ಲಭ್ಯವಾಗದ ಸುಮಾರು ಒಂದು ಕೋಟಿ ಮತದಾರರನ್ನು ಯಾವ ಆಧಾರದ ಮೇಲೆ ಡಿಲೀಟ್ ಮಾಡಲಾಗುತ್ತಿದೆ?
ಹಲವು ಜಿಲ್ಲೆಗಳಲ್ಲಿ ಎನ್ಯುಮರೇಷನ್ ಫಾರ್ಮ್‌ಗಳ 100% ವಿತರಣೆ ಹಾಗೂ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಘೋಷಿಸಿದ್ದರೂ, ಇನ್ನೂ ಫಾರ್ಮ್ ಸಿಗದೆ ಪರದಾಡುತ್ತಿರುವ ಮತದಾರರ ಬಗ್ಗೆ ಉತ್ತರವೇನು?
BLO ಆ್ಯಪ್‌ನಲ್ಲಿರುವ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ವ್ಯವಸ್ಥೆ ಕುರಿತು BLO ಹಾಗೂ BLAಗಳಿಗೆ ಸೂಕ್ತ ಮಾಹಿತಿ ಮತ್ತು ತರಬೇತಿ ಏಕೆ ನೀಡಿಲ್ಲ?
‘Others’ ವಿಭಾಗದಲ್ಲಿ ಸೇರಿರುವ ಮತದಾರರು ಯಾರು? ಹಾಗೂ ಈ ಪ್ರಕ್ರಿಯೆಯಲ್ಲಿ ಪತ್ತೆಯಾದ ಅಕ್ರಮ ವಲಸಿಗರ ಸಂಖ್ಯೆ ಎಷ್ಟು?
ಡಿಲೀಷನ್ ಹೆಚ್ಚಲು ಕಾರಣಗಳೇನು?
ಒಕ್ಕೂಟದ ಅಭಿಪ್ರಾಯದಲ್ಲಿ, SIR ಪ್ರಕ್ರಿಯೆಯ ವಿನ್ಯಾಸವೇ ವೈಜ್ಞಾನಿಕತೆ ಹಾಗೂ ಪಾರದರ್ಶಕತೆಯ ಕೊರತೆಯಿಂದ ಕೂಡಿದೆ. ಸಮರ್ಪಕ ತರಬೇತಿ ಮತ್ತು ಸೌಲಭ್ಯಗಳಿಲ್ಲದೆ BLOಗಳ ಮೂಲಕ ತ್ವರಿತವಾಗಿ ಪ್ರಕ್ರಿಯೆ ನಡೆಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಸ್ಥಳಾಂತರಗೊಂಡವರು ಹಾಗೂ ತಾತ್ಕಾಲಿಕವಾಗಿ ಮನೆಯಲ್ಲಿ ಇಲ್ಲದವರನ್ನು ಡಿಲೀಟ್ ಪಟ್ಟಿಗೆ ಸೇರಿಸುವ ವಿಧಾನವೇ ಅತಿ ದೊಡ್ಡ ದೋಷ ಎಂದು ಒಕ್ಕೂಟ ಆರೋಪಿಸಿದೆ.

ಚುನಾವಣಾ ಆಯೋಗಕ್ಕೆ ಒತ್ತಾಯ
ಒಕ್ಕೂಟವು ಚುನಾವಣಾ ಆಯೋಗವನ್ನು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ:
ಡಿಲೀಷನ್ ಪ್ರಮಾಣದ ಕುರಿತು ಸಾರ್ವಜನಿಕ ಅವಲೋಕನ ನಡೆಸಿ, ನಾಗರಿಕ ಸಂಘಟನೆಗಳ ಅಭಿಪ್ರಾಯಕ್ಕೂ ಅವಕಾಶ ನೀಡಬೇಕು.
ಸ್ಥಳಾಂತರಗೊಂಡ ಹಾಗೂ ಮನೆಗೆ ಭೇಟಿ ವೇಳೆ ಲಭ್ಯವಾಗದ ಮತದಾರರನ್ನು ಯಾವುದೇ ಕಾರಣಕ್ಕೂ ಡಿಲೀಟ್ ಮಾಡಬಾರದು.
ಎನ್ಯುಮರೇಷನ್ ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಒಂದು ತಿಂಗಳು ವಿಸ್ತರಿಸಿ, ಸ್ಥಳಾಂತರಗೊಂಡವರಿಗೆ ಹೊಸ ವಿಳಾಸದಲ್ಲಿ ನೋಂದಣಿ ಹಾಗೂ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಪ್ರತಿ ಬೂತ್ ಮಟ್ಟದಲ್ಲಿ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಿ, ಆಕ್ಷೇಪಣೆಗಳಿಗೆ ಅವಕಾಶ ನೀಡಬೇಕು.

ಎಚ್ಚರಿಕೆ
ಚುನಾವಣಾ ಆಯೋಗ ನಾಗರಿಕ ಸಂಘಟನೆಗಳ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ, ಅಕ್ರಮ ಡಿಲೀಷನ್‌ಗಳನ್ನು ಮುಂದುವರಿಸಿದರೆ ಹಾಗೂ SIR ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಒಕ್ಕೂಟ ಎಚ್ಚರಿಸಿದೆ.

City Today News 9341997936