
ಮೈಸೂರು, ಸೆ.16: ಖ್ಯಾತ ಇತಿಹಾಸಜ್ಞ, ಸಂಶೋಧಕ ಹಾಗೂ ಸಾಹಿತಿ ಪ್ರೊ. ಪಿ.ವಿ. ನಂಜರಾಜ ಅರಸ್ ಅವರ ‘ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್’ ಕೃತಿಗೆ ಪ್ರತಿಷ್ಠಿತ ‘ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ 2026’ ಪ್ರದಾನ ಮಾಡಲಾಯಿತು.
ಮೈಸೂರಿನಲ್ಲಿರುವ ಪ್ರೊ. ನಂಜರಾಜ ಅರಸ್ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಸತ್ಯಸಾಯಿ (ಅನಂತಪುರ) ಜಿಲ್ಲೆಯ ಹಿಂದೂಪುರಂನ ಆಲ್ ಇಂಡಿಯಾ ಶಹೀದ್ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ಕಲ್ಲೂರು ಉಮರ್ ಫಾರೂಕ್ ಖಾನ್ ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ದಲಿತ್ ಆಲ್ ಇಂಡಿಯಾ ಶಹೀದ್ ಟಿಪ್ಪು ಸುಲ್ತಾನ್ ಹ್ಯುಮಾನಿಟೇರಿಯನ್ ಬ್ಲಡ್ ಡೊನೇಷನ್ ಅಸೋಸಿಯೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಆರ್. ಹನುಮಂತು ಅಧ್ಯಕ್ಷತೆ ವಹಿಸಿದ್ದರು. ಕವಿ ಹಾಗೂ ಸಂಶೋಧಕ ಡಾ. ವಡ್ಡಗೆರೆ ನಾಗರಾಜಯ್ಯ ಮಾರ್ಗದರ್ಶನ ನೀಡಿದರು.
ಮೈಸೂರು ಇತಿಹಾಸ, ಮೈಸೂರು ಒಡೆಯರ್ ಮನೆತನ, ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕುರಿತಂತೆ ಪ್ರೊ. ನಂಜರಾಜ ಅರಸ್ ಅವರು ನಡೆಸಿರುವ ಸಂಶೋಧನೆ, ಐತಿಹಾಸಿಕ ದಾಖಲೆಗಳ ಅಧ್ಯಯನ ಹಾಗೂ ಇತಿಹಾಸದ ವಿವಿಧ ಆಯಾಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅವರ ಪ್ರಯತ್ನಗಳನ್ನು ಗುರುತಿಸಿ ಈ ರಾಷ್ಟ್ರೀಯ ಗೌರವ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಲ್ಲೂರು ಉಮರ್ ಫಾರೂಕ್ ಖಾನ್, “ಕನ್ನಡ ನಾಡಿನ ಚರಿತ್ರೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನಂಜರಾಜ ಅರಸ್ ಅವರ ಕೊಡುಗೆ ಮಹತ್ವದ್ದಾಗಿದೆ. ಇತಿಹಾಸಜ್ಞ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಅವರು ಬಹುಮುಖ ಪ್ರತಿಭೆ ಹೊಂದಿದ್ದಾರೆ. ಹೊಸ ತಲೆಮಾರಿನ ಯುವಕರು ತಮ್ಮ ಪೂರ್ವಿಕರ ಇತಿಹಾಸವನ್ನು ಅರಿಯುವ ಅಗತ್ಯವಿದ್ದು, ಯುವಜನರಲ್ಲಿ ಚರಿತ್ರೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅರಸ್ ಅವರ ಪ್ರಯತ್ನಗಳು ಗಮನಾರ್ಹ,” ಎಂದರು.
ಸಾಮಾಜಿಕ ಹೋರಾಟಗಾರ ಹಾಗೂ ಮಡಕಶಿರಾದ ಎಂ.ಆರ್. ಹನುಮಂತು ಮಾತನಾಡಿ, “ಇಂದಿನ ಸಂದರ್ಭದಲ್ಲಿ ಸಂಶೋಧನಾತ್ಮಕ ಬರಹಗಳು ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಗತ್ಯವಾಗಿದೆ. ಧಾರ್ಮಿಕ ಸಾಮರಸ್ಯ, ಸಹಿಷ್ಣುತೆ, ಬ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯದಂತಹ ಮೌಲ್ಯಗಳ ಕುರಿತು ದೇಶಾದ್ಯಂತ ಅರಿವು ಮೂಡಬೇಕು,” ಎಂದು ಹೇಳಿದರು.
ಕವಿ-ಸಂಶೋಧಕ ಡಾ. ವಡ್ಡಗೆರೆ ನಾಗರಾಜಯ್ಯ ಮಾತನಾಡಿ, “ಮೈಸೂರು ಸೀಮೆಯ ವೈಚಾರಿಕ ಹಾಗೂ ಪ್ರಬುದ್ಧ ಸಾಂಸ್ಕೃತಿಕ ವಾತಾವರಣವನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯ. ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ಪ್ರೊ. ಕೆ. ರಾಮದಾಸ್, ದೇವನೂರ ಮಹಾದೇವ, ಪ್ರೊ. ಪಿ.ವಿ. ನಂಜರಾಜ ಅರಸ್ ಹಾಗೂ ಪ್ರೊ. ಎಚ್. ಗೋವಿಂದಯ್ಯ ಸೇರಿದಂತೆ ಹಲವು ಗಣ್ಯರು ರೂಪಿಸಿದ ಸಾಂಸ್ಕೃತಿಕ ಪರಂಪರೆ ಮುಂದುವರಿಯಬೇಕು,” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಲ್ಲೂರು ಉಮರ್ ಫಾರೂಕ್ ಖಾನ್ ಅವರು ತಾವು ರಚಿಸಿರುವ ‘ಶ್ರೀ ಶಾರದಾ ಮಾತಾ ಶೃಂಗೇರಿ ಪೀಠ ರಕ್ಷಕುಡು ಶಹೀದ್ ಟಿಪ್ಪು ಸುಲ್ತಾನ್’ ಎಂಬ ತೆಲುಗು ಕೃತಿಯ ಪ್ರಕಟಣಾ ಪೂರ್ವ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದ ಬಳಿಕ ಪ್ರೊ. ನಂಜರಾಜ ಅರಸ್ ಅವರು ಕಲ್ಲೂರು ಉಮರ್ ಫಾರೂಕ್ ಖಾನ್ ಅವರನ್ನು ಸನ್ಮಾನಿಸಿ, ಟಿಪ್ಪು ಸುಲ್ತಾನರ ಶೌರ್ಯದ ಸಂಕೇತವಾಗಿ ಪರಿಗಣಿಸಲಾದ ಹುಲಿಯ ಪಟ್ಟೆಗಳ ವಿನ್ಯಾಸದ ಶಾಲು ಹೊದಿಸಿದರು. ಜೊತೆಗೆ ತಮ್ಮ ‘ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್’ ಕೃತಿಯನ್ನು ಅವರಿಗೆ ನೀಡಿದರು.
City Today News 9341997936

You must be logged in to post a comment.