
ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ಮುಂದಾಳು, ೮೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಬರಹಗಾರ, ನ್ಯಾಯವಾದಿ ಮತ್ತು ನಿವೃತ್ತ ನ್ಯಾಯಾಧೀಶರಾಗಿದ್ದ ಕೋ.ಚೆನ್ನಬಸಪ್ಪ ಅವರು ೧೯೨೨ರ ಫೆಬ್ರುವರಿ ೨೭ರಂದು ಜನಿಸಿದವರು. ೨೦೧೩ರಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರ ಜನ್ಮಶತಮಾನೋತ್ಸವವನ್ನು ೨೦೨೨ರ ಫೆಬ್ರುವರಿ ೨೭ರಿಂದ ಶ್ರೀ ಕೋಚೆನ್ನಬಸಪ್ಪ ಶತಮಾನೋತ್ಸವ ಸಮಿತಿ ರಾಜ್ಯದಾದ್ಯಂತ ಆಚರಿಸಿದೆ. ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಇದೇ ಫೆಬ್ರುವರಿ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಟ್ಟುಕೊಳ್ಳಲಾಗಿದೆ.

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ.ಗೋಪಾಲಗೌಡ ಅವರು ಸಮಾರಂಭಕ್ಕೆ ಚಾಲನೆ ನೀಡಿ ಕೋಚೆ ಅವರ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದ ಕೋಚೆ ಸಮಗ್ರ ಸಾಹಿತ್ಯದ ಎರಡು ಸಂಪುಟಗಳನ್ನು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮತ್ತು ಕೇಂದ್ರ ಆಡಳಿತ ನ್ಯಾಯಮಂಡಲಿ ಉಪಾಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಸುಜಾತ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಸಂಪಾದಿಸಿದ ಕೋಚೆ ಜನ್ಮಶತಮಾನೋತ್ಸವ ಸಮಾರಂಭಗಳಲ್ಲಿ ಮಂಡನೆಯಾದ ಉಪನ್ಯಾಸಗಳು ಮತ್ತು ವರದಿಗಳ ಸ್ಮರಣ ಗ್ರಂಥ ‘ಕೋಚೆ ನೂರರ ನೆನಪು’ ಕೃತಿಯನ್ನು ಹಿರಿಯ ಪತ್ರಕರ್ತೆ ಡಾ.ವಿಜಯಾ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಭಾಪತಿ ಮತ್ತು ಚಿತ್ರಕಲಾಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ನಾಡೋಜ ಕೋ.ಚೆನ್ನಬಸಪ್ಪ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ನಾಡೋಜ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆ ವಹಿಸಲಿದ್ದಾರೆ. ಇಳಕಲ್ ಚಿತ್ತರಗಿ ಸಂಸ್ಥಾನಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಗುರು ಮಹಾಂತಸ್ವಾಮಿಗಳು ಸಾನಿಧ್ಯ ವಹಿಸಲಿದ್ದು ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮಹೇಶ್ ಕರ್ಜಗಿ ಭಾಗವಹಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್ ಚಲವಾದಿ, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಮತ್ತು ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ ಅಧ್ಯಕ್ಷ ಡಾ.ಕೆ.ಸಿ.ಗುರುದೇವ್ ಅವರು ಉಪಸ್ಥಿತರಿರಲಿದ್ದಾರೆ.
ಸಮಾರಂಭದ ಪ್ರಾರಂಭದಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರಿಂದ ವಚನ ಗಾಯನ ಇರುತ್ತದೆ.
ನಾಡಿನ ಈಚೆ-ಆಚೆಗಳನ್ನೆಲ್ಲ ಬಲ್ಲವರಾಗಿದ್ದ, ದೇಶದ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಮತ್ತು ರೈತ ಹೋರಾಟಗಳಲ್ಲಿ ಕ್ರಿಯಾಶೀಲ ಪಾತ್ರವಹಿಸಿದ್ದ ಮತ್ತು ಕನ್ನಡ ಸಾಹಿತ್ಯ ಕಣಜಕ್ಕೆ ವಿಚಾರಪೂರ್ಣ ಕೊಡುಗೆ ನೀಡಿದ್ದ ನಾಡೋಜ ಕೋ. ಚೆನ್ನಬಸಪ್ಪ ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಈ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936