
ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸುವ ಯತ್ನ ನಡೆದಿರುವ ಆರೋಪ ಬೆಂಗಳೂರು ದಕ್ಷಿಣ ತಾಲೂಕಿನ ಗುಳಕಮಲೆ ಗ್ರಾಮದಲ್ಲಿ ಕೇಳಿಬಂದಿದೆ. ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯ ಹೆಚ್. ಕೃಷ್ಣಪ್ಪ ಎಂಬವರ ಹೆಸರು ಈ ಪ್ರಕರಣದಲ್ಲಿ ಮುಂಚೂಣಿಗೆ ಬಂದಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ‘ಕಾಣದ ಕೈ’ ಇದೆ ಎಂಬ ಅನುಮಾನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರವು ವೇಗವಾಗಿ ರಿಯಲ್ ಎಸ್ಟೇಟ್ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆ, ಸುತ್ತಮುತ್ತಲಿನ ಸರ್ಕಾರಿ ಜಮೀನುಗಳ ಬೆಲೆ ಏರಿಕೆಯಾಗುತ್ತಿದೆ. ರಿಂಗ್ ರೋಡ್, ಪೆರಿಫೆರಲ್ ರಸ್ತೆ, ಬಿಸಿನೆಸ್ ಕಾರಿಡಾರ್ ಹಾಗೂ ಕೈಗಾರಿಕಾ ಅಭಿವೃದ್ಧಿ ಘೋಷಣೆಗಳ ನಡುವೆ, ಸರ್ಕಾರಿ ಭೂಮಿಗಳ ಮೇಲೆ ಅಕ್ರಮ ಕಬಳಿಕೆ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಗುಳಕಮಲೆ ಗ್ರಾಮದ ಸರ್ವೆ ಸಂಖ್ಯೆ 35ರಲ್ಲಿ ದಾಖಲಾಗಿರುವ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ರಿಜಿಸ್ಟ್ರೇಷನ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಗುಳಕಮಲೆ, ನಲ್ಲಕ್ಕನ ದೊಡ್ಡಿ ಮತ್ತು ಕುಂಚಿಗರ ಪಾಳ್ಯ ಗ್ರಾಮಗಳ ನಿವಾಸಿಗಳು ಒಟ್ಟಾಗಿ ಹಗರಣವನ್ನು ಬಹಿರಂಗಪಡಿಸಿದ್ದಾರೆ.
ಆರೋಪಗಳ ಪ್ರಕಾರ, ಸುಮಾರು 17 ಎಕರೆ ಭೂಮಿಯನ್ನು ಒಂದೇ ಕುಟುಂಬದ ಹೆಸರಿನಲ್ಲಿ ಹಳೆಯ ಕೈಬರಹದ ದಾಖಲೆಗಳನ್ನು ತೋರಿಸಿ ಕಬಳಿಸಲಾಗಿದೆ. ಪಹಣಿ, ಆರ್‌ಟಿಸಿ, ಇಸಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಹೆಸರು ಸೇರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಗ್ರಾಂಟ್ ಇಲ್ಲದೇ, ಸರ್ವೆ ಸ್ಕೆಚ್ ಇಲ್ಲದೇ ಹಾಗೂ ಪೋಡಿ ದುರಸ್ತಿ ಆಗದೇ ಇದ್ದರೂ, ಈ ಜಮೀನುಗಳನ್ನು ನಕಲಿ ರೈತರ ಹೆಸರಿನಲ್ಲಿ ತೋರಿಸಿ, ನಂತರ ದೊಡ್ಡಾಲಹಳ್ಳಿಯ ಹೆಚ್. ಕೃಷ್ಣಪ್ಪ ಅವರ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಯನಗರ ವ್ಯಾಪ್ತಿಯ ಕೋಣನಕುಂಟೆ ಉಪನೋಂದಣಿ ಕಚೇರಿಯಲ್ಲಿ 10 ಎಕರೆ ಮತ್ತು 7 ಎಕರೆ ಜಮೀನುಗಳನ್ನು ಪ್ರತ್ಯೇಕವಾಗಿ 2025 ಮತ್ತು 2026ರಲ್ಲಿ ರಿಜಿಸ್ಟರ್ ಮಾಡಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಈ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಸ್ತಾಂತರವಾಗಿರುವ ಶಂಕೆಯಿದೆ. ಸಂಬಂಧಿತ ಅಧಿಕಾರಿಗಳು ಲಂಚ ಪಡೆದು ನಕಲಿ ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆ ನಡೆಸಿರುವ ಸಾಧ್ಯತೆಯೂ ವ್ಯಕ್ತವಾಗಿದೆ.
ಈ ಪ್ರಕರಣ ಸಂಬಂಧ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಳಿಯ ಅಧ್ಯಕ್ಷ ಕೆ.ಟಿ. ಮುನಿಯಪ್ಪ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳಿಗೂ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ, ನೋಂದಣಿ ಮಹಾಪರಿವೀಕ್ಷಕ, ಮುದ್ರಾಂಕ ಆಯುಕ್ತ, ತಹಸೀಲ್ದಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಈ ಹಗರಣದ ಸಮಗ್ರ ತನಿಖೆ ನಡೆಸಿ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಜೊತೆಗೆ, ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಬೇಕು, ಹಾಗೂ ಭೂಮಿಯನ್ನು ನಿಜವಾದ ಬಡ ರೈತರು, ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಸಂಬಂಧಿತ ಉಪನೋಂದಣಿ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಕೂಡ ಒತ್ತಾಯಿಸಲಾಗಿದೆ.
City Today News 9341997936
