ಮಹಿಳಾ ಕೋಟಾದಡಿ ನಯನ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಬೆಂಗಳೂರು, ಆಗಸ್ಟ್ 6: ಮಹಿಳಾ ಕೋಟಾದಡಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ ಅವರನ್ನು ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಸಂಘಟನೆಯೊಂದು ಆಗ್ರಹಿಸಿದೆ.

ನಗರದ ಬೆಂಗಳೂರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ, ಶಿಸ್ತಿನ ನಾಯಕಿ ಹಾಗೂ ಜನಪ್ರಿಯ ಶಾಸಕಿಯಾಗಿ ಗುರುತಿಸಿಕೊಂಡಿರುವ ನಯನ ಮೋಟಮ್ಮ ಅವರಿಗೆ ಇದುವರೆಗೆ ಸಚಿವ ಸ್ಥಾನ ನೀಡದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು. ಪಕ್ಷದ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಯನ ಮೋಟಮ್ಮ ಅವರ ತಾಯಿ ಹಾಗೂ ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಅವರ ರಾಜಕೀಯ ಮತ್ತು ಆಡಳಿತಾತ್ಮಕ ಸೇವೆಯನ್ನು ಸ್ಮರಿಸಿದ ಅವರು, ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆ ಮೂಲಕ ರಾಜ್ಯದ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿದೆ ಎಂದು ಹೇಳಿದರು. ಅಲ್ಲದೆ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಹಾಗೂ ಕರ್ನಾಟಕ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಮೋಟಮ್ಮ ಅವರು ದಕ್ಷ ಆಡಳಿತಗಾರ್ತಿಯಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದರು.

ಶಾಸಕಿ ನಯನ ಮೋಟಮ್ಮ ಅವರು ಉತ್ತಮ ವಿದ್ಯಾರ್ಹತೆ, ಸೌಮ್ಯ ವ್ಯಕ್ತಿತ್ವ, ಸಂಘಟನಾ ಸಾಮರ್ಥ್ಯ ಹಾಗೂ ಕಾಂಗ್ರೆಸ್ ಪಕ್ಷದ ಮೇಲಿನ ಅಚಲ ನಿಷ್ಠೆಯನ್ನು ಹೊಂದಿದ್ದು, ಸಚಿವ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ದೊರೆಯುವುದರ ಜೊತೆಗೆ ಯುವ ಮಹಿಳೆಯರು ಸಾರ್ವಜನಿಕ ಜೀವನ ಮತ್ತು ರಾಜಕೀಯ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಗಲಿದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕಿಯರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕರ್ನಾಟಕ ಕಾಂಗ್ರೆಸ್ ನಾಯಕತ್ವ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ನಯನ ಮೋಟಮ್ಮ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು ಎಂದು ಸಂಘಟನೆ ಮನವಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ. ಮಲ್ಲಿಕಾರ್ಜುನ ಸ್ವಾಮಿ, ನಯನ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡುವುದು ಮಹಿಳಾ ನಾಯಕತ್ವಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯೊಬ್ಬರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಆದ್ದರಿಂದ ಅವರನ್ನು ಶೀಘ್ರದಲ್ಲೇ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕೆಂದು ಸಂಘಟನೆಯ ಪರವಾಗಿ ಆಗ್ರಹಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.