52 ಎಕರೆ ಪ್ರದೇಶದಲ್ಲಿ ಗ್ರೇಡ್-ಎ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಪಾರ್ಕ್

ಬೆಂಗಳೂರು, ಸೆಪ್ಟೆಂಬರ್ 1, 2026: ದಕ್ಷಿಣ ಭಾರತದ ಪ್ರಮುಖ ವೈವಿಧ್ಯಮಯ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ಸುಮಧುರ ಗ್ರೂಪ್, ಚೆನ್ನೈನಲ್ಲಿ ತನ್ನ ಮೊದಲ ಗ್ರೇಡ್-ಎ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ಅಭಿವೃದ್ಧಿಪಡಿಸಲು ಮುಂದಾಗಿದೆ. ಉತ್ತರ ಚೆನ್ನೈನ ರೆಡ್ ಹಿಲ್ಸ್‌ನಲ್ಲಿ, ಚೆನ್ನೈ ಪೆರಿಫೆರಲ್ ರಿಂಗ್ ರೋಡ್ (CPRR) ಸಮೀಪ ಈ ಯೋಜನೆ ನಿರ್ಮಾಣವಾಗಲಿದ್ದು, ಸುಮಾರು ₹400 ಕೋಟಿ ಹೂಡಿಕೆ ಮಾಡಲಾಗುತ್ತಿದೆ.
52 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಯಾಗಲಿರುವ ಈ ಯೋಜನೆಯಲ್ಲಿ ಸುಮಾರು 12 ಲಕ್ಷ ಚದರ ಅಡಿ ಗ್ರೇಡ್-ಎ ಗೋದಾಮು ಸೌಲಭ್ಯಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯಿಂದ ಸುಮಾರು 2,500 ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಕಾಮಗಾರಿಯನ್ನು 2028ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಬೆಂಗಳೂರಿನ ಹೊಸಕೋಟೆಯಲ್ಲಿ ಸುಮಧುರ ಗ್ರೂಪ್ ಈಗಾಗಲೇ ಅಭಿವೃದ್ಧಿಪಡಿಸಿರುವ ಲಾಜಿಸ್ಟಿಕ್ಸ್ ಪಾರ್ಕ್‌ನ ಗ್ರೇಡ್-ಎ ಗುಣಮಟ್ಟದ ಮಾನದಂಡಗಳನ್ನು ಆಧರಿಸಿ ಚೆನ್ನೈ ಯೋಜನೆಯನ್ನು ರೂಪಿಸಲಾಗುತ್ತಿದೆ. ಆಧುನಿಕ ಮೂಲಸೌಕರ್ಯ, ಉನ್ನತ ಮಟ್ಟದ ಸುರಕ್ಷತಾ ವ್ಯವಸ್ಥೆ, ಸಾಮಾನ್ಯ ವ್ಯವಹಾರ ಸೌಲಭ್ಯಗಳು ಹಾಗೂ ಪರಿಸರ ಸ್ನೇಹಿ ಮತ್ತು ಸುಸ್ಥಿರ ವಿನ್ಯಾಸಕ್ಕೆ ಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತಿದೆ.
ಆಟೋಮೊಬೈಲ್, ಇ-ಕಾಮರ್ಸ್, ತೃತೀಯ ಪಕ್ಷದ ಲಾಜಿಸ್ಟಿಕ್ಸ್ (3PL) ಸೇರಿದಂತೆ ವಿವಿಧ ಉದ್ಯಮಗಳ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಪಾರ್ಕ್ ಅಭಿವೃದ್ಧಿಯಾಗಲಿದೆ. ಆಧುನಿಕ ಗೋದಾಮು ವ್ಯವಸ್ಥೆ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳ ಮೂಲಕ ಕಂಪನಿಗಳ ಸರಕು ನಿರ್ವಹಣೆ ಹಾಗೂ ದೈನಂದಿನ ಕಾರ್ಯಾಚರಣೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ರೆಡ್ ಹಿಲ್ಸ್ ಪ್ರದೇಶವು ಪ್ರಮುಖ ಕೈಗಾರಿಕಾ ಮತ್ತು ಗೋದಾಮು ವಲಯಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಪ್ರಮುಖ ಹೆದ್ದಾರಿಗಳು, ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಕೇಂದ್ರ ವ್ಯಾಪಾರ ಜಿಲ್ಲೆ (CBD) ಹಾಗೂ ಪ್ರಾದೇಶಿಕ ಮಾರುಕಟ್ಟೆಗಳಿಗೆ ಸುಗಮ ಸಂಪರ್ಕದ ಜತೆಗೆ ಎನ್ನೋರ್, ಕಾಟುಪಳ್ಳಿ ಮತ್ತು ಚೆನ್ನೈ ಬಂದರುಗಳಿಗೂ ಸಮೀಪದಲ್ಲಿರುವುದು ಯೋಜನೆಯ ಪ್ರಮುಖ ಅನುಕೂಲವಾಗಿದೆ. ಇದರಿಂದ ದೇಶೀಯ ಸರಕು ಸಾಗಣೆ ಮಾತ್ರವಲ್ಲದೆ ರಫ್ತು ಚಟುವಟಿಕೆಗಳಿಗೂ ಹೆಚ್ಚಿನ ವೇಗ ಮತ್ತು ಸಂಪರ್ಕ ದೊರೆಯಲಿದೆ.
ಸುಮಧುರ ಗ್ರೂಪ್ ಈಗಾಗಲೇ ಬೆಂಗಳೂರಿನ ಹೊಸಕೋಟೆಯಲ್ಲಿ 25 ಲಕ್ಷ ಚದರ ಅಡಿ ಗ್ರೇಡ್-A+ ಲಾಜಿಸ್ಟಿಕ್ಸ್ ಪಾರ್ಕ್ ನಿರ್ವಹಿಸುತ್ತಿದೆ. ನಿಪ್ಪಾನ್ ಎಕ್ಸ್‌ಪ್ರೆಸ್ (NX Logistics), ಅಮೆಜಾನ್, ಜೆಪ್ಟೋ ಮತ್ತು ಝೊಮ್ಯಾಟೊ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಇಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಸುಮಧುರ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ್ ಜಿ. ಮಾತನಾಡಿ, ಬಲಿಷ್ಠ ಉತ್ಪಾದನಾ ವಲಯ, ಬಂದರುಗಳ ಉತ್ತಮ ಸಂಪರ್ಕ ಹಾಗೂ ರೆಡ್ ಹಿಲ್ಸ್, ಶ್ರೀಪೆರಂಬದೂರು ಮತ್ತು ಓರಗಡಂನಂತಹ ಕೈಗಾರಿಕಾ-ಲಾಜಿಸ್ಟಿಕ್ಸ್ ಕೇಂದ್ರಗಳ ವೇಗದ ಬೆಳವಣಿಗೆಯಿಂದಾಗಿ ಚೆನ್ನೈ, ವೇರ್‌ಹೌಸಿಂಗ್ ವ್ಯವಹಾರದ ವಿಸ್ತರಣೆಗೆ ಸೂಕ್ತ ತಾಣವಾಗಿದೆ ಎಂದು ಹೇಳಿದರು.
ಗ್ರೂಪ್‌ನ ಇಂಡಸ್ಟ್ರಿಯಲ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ನಿರ್ದೇಶಕ ವಂಶಿ ಕರಂಗುಲ ಮಾತನಾಡಿ, ದೇಶದಲ್ಲಿ ಗ್ರೇಡ್-ಎ ಗೋದಾಮುಗಳತ್ತ ಕಂಪನಿಗಳ ಒಲವು ಹೆಚ್ಚುತ್ತಿದ್ದು, ಗುಣಮಟ್ಟದ ಮೂಲಸೌಕರ್ಯ ಮತ್ತು ದೊಡ್ಡ ಪ್ರಮಾಣದ ವೇರ್‌ಹೌಸಿಂಗ್ ಸ್ಥಳಗಳಿಗೆ ಬೇಡಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದರು.
2026ರ ಮೊದಲಾರ್ಧದಲ್ಲಿ ಚೆನ್ನೈನಲ್ಲಿ ಸುಮಾರು 41 ಲಕ್ಷ ಚದರ ಅಡಿ ಗ್ರೇಡ್-ಎ ಕೈಗಾರಿಕಾ ಮತ್ತು ವೇರ್‌ಹೌಸಿಂಗ್ ಸ್ಥಳಕ್ಕೆ ಬೇಡಿಕೆ ದಾಖಲಾಗಿದೆ. ದೇಶದ ಪ್ರಮುಖ ಎಂಟು ನಗರಗಳಲ್ಲಿ ಇದು ಎರಡನೇ ಅತಿ ಹೆಚ್ಚಿನ ಪ್ರಮಾಣವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಚೆನ್ನೈನಲ್ಲಿ ಬೇಡಿಕೆ ಶೇ.11ರಷ್ಟು ಏರಿಕೆಯಾಗಿದೆ.
ಚೆನ್ನೈ ಯೋಜನೆ ಪೂರ್ಣಗೊಂಡ ಬಳಿಕ ಸುಮಧುರ ಗ್ರೂಪ್‌ನ ಒಟ್ಟು ವೇರ್‌ಹೌಸಿಂಗ್ ಭೂಮಿ ಪೋರ್ಟ್‌ಫೋಲಿಯೊ 150 ಎಕರೆಗೂ ಅಧಿಕವಾಗಲಿದೆ. ದಕ್ಷಿಣ ಭಾರತದಲ್ಲಿ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಸಂಸ್ಥೆಯ ವಿಸ್ತರಣೆಯನ್ನು ಇದು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಸುಮಧುರ ಗ್ರೂಪ್ ಸುಮಾರು ಮೂರು ದಶಕಗಳ ಅನುಭವ ಹೊಂದಿರುವ ದಕ್ಷಿಣ ಭಾರತದ ಪ್ರಮುಖ ವೈವಿಧ್ಯಮಯ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದೆ. ವಸತಿ, ವಾಣಿಜ್ಯ, ವೇರ್‌ಹೌಸಿಂಗ್ ಮತ್ತು ಕೋ-ಲಿವಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರಿನ ಜತೆಗೆ ಹೈದರಾಬಾದ್‌ನಲ್ಲಿಯೂ ತನ್ನ ಅಸ್ತಿತ್ವವನ್ನು ಬಲಪಡಿಸಿರುವ ಸುಮಧುರ ಗ್ರೂಪ್, ಇದುವರೆಗೆ 56ಕ್ಕೂ ಹೆಚ್ಚು ಯೋಜನೆಗಳನ್ನು 1.7 ಕೋಟಿ ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ಪೂರ್ಣಗೊಳಿಸಿದೆ. ಮುಂದಿನ ದಿನಗಳಲ್ಲಿ 4 ಕೋಟಿ ಚದರ ಅಡಿಗೂ ಅಧಿಕ ವಿಸ್ತೀರ್ಣದ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
City Today News 9341997936
