ಎಐ ಆಧಾರಿತ ನೈಜ-ಸಮಯದ ಮಾತನಾಡುವ ಅಭ್ಯಾಸ ಹಾಗೂ ವೈಯಕ್ತೀಕರಿಸಿದ ಕಲಿಕೆಯ ಸೌಲಭ್ಯ

ಬೆಂಗಳೂರು, ಸೆಪ್ಟೆಂಬರ್ 3, 2026: ವಿಶ್ವದ ಪ್ರಮುಖ ಮೊಬೈಲ್ ಆಧಾರಿತ ಕಲಿಕಾ ವೇದಿಕೆಯಾದ ಡ್ಯುಯೊಲಿಂಗೊ, ಭಾರತದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ಜತೆ ಮಹತ್ವದ ಸಹಭಾಗಿತ್ವಕ್ಕೆ ಕೈಜೋಡಿಸಿದೆ. ಈ ಒಪ್ಪಂದದಡಿ ಏರ್‌ಟೆಲ್‌ನ ಸುಮಾರು 37.6 ಕೋಟಿ ಗ್ರಾಹಕರಿಗೆ 12 ತಿಂಗಳ ಕಾಲ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೂಪರ್ ಡ್ಯುಯೊಲಿಂಗೊ ಚಂದಾದಾರಿಕೆ ಲಭ್ಯವಾಗಲಿದೆ.
ಈ ಸಹಭಾಗಿತ್ವದ ಮೂಲಕ ದೇಶದಾದ್ಯಂತ ಲಕ್ಷಾಂತರ ಜನರಿಗೆ ಹೊಸ ಭಾಷೆಗಳನ್ನು ಕಲಿಯಲು ಅತ್ಯಾಧುನಿಕ ಡಿಜಿಟಲ್ ವೇದಿಕೆಯ ಸೌಲಭ್ಯ ದೊರೆಯಲಿದೆ. ಜಾಹೀರಾತು ರಹಿತ ಪ್ರೀಮಿಯಂ ಕಲಿಕಾ ಅನುಭವದ ಜೊತೆಗೆ, ಎಐ ಆಧಾರಿತ ನೈಜ-ಸಮಯದ ಮಾತನಾಡುವ ಅಭ್ಯಾಸ, ವೈಯಕ್ತೀಕರಿಸಿದ ಅಭ್ಯಾಸಗಳು ಮತ್ತು ಕಲಿಕೆಯ ವೇಳೆ ಆಗುವ ತಪ್ಪುಗಳನ್ನು ಗುರುತಿಸಿ ಅವುಗಳನ್ನು ಸುಧಾರಿಸಿಕೊಳ್ಳುವ ಅವಕಾಶವೂ ಗ್ರಾಹಕರಿಗೆ ದೊರೆಯಲಿದೆ.
ಡ್ಯುಯೊಲಿಂಗೊ ವಿಶ್ವದ ಅತ್ಯಂತ ಜನಪ್ರಿಯ ಭಾಷಾ ಕಲಿಕಾ ವೇದಿಕೆಗಳಲ್ಲಿ ಒಂದಾಗಿದ್ದು, 40ಕ್ಕೂ ಹೆಚ್ಚು ಭಾಷೆಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಒದಗಿಸುತ್ತದೆ. ಚಿಕ್ಕ ಅವಧಿಯ ಪಾಠಗಳು, ಆಟದ ಮಾದರಿಯ ಕಲಿಕಾ ವಿಧಾನ, ವೈಯಕ್ತೀಕರಿಸಿದ ಅಭ್ಯಾಸ ಹಾಗೂ ಎಐ ಆಧಾರಿತ ವೈಶಿಷ್ಟ್ಯಗಳ ಮೂಲಕ ಭಾಷಾ ಕಲಿಕೆಯನ್ನು ಸುಲಭ ಮತ್ತು ಆಸಕ್ತಿದಾಯಕವಾಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಭಾಷೆಗಳ ಜೊತೆಗೆ ಬಳಕೆದಾರರು ಚೆಸ್, ಗಣಿತ ಮತ್ತು ಸಂಗೀತವನ್ನೂ ಈ ವೇದಿಕೆಯ ಮೂಲಕ ಕಲಿಯಬಹುದಾಗಿದೆ.
ಸೂಪರ್ ಡ್ಯುಯೊಲಿಂಗೊ ಚಂದಾದಾರಿಕೆಯಲ್ಲಿ ಜಾಹೀರಾತು ರಹಿತ ಕಲಿಕೆ, ಅನ್‌ಲಿಮಿಟೆಡ್ ಎನರ್ಜಿ ಸೇರಿದಂತೆ ಹಲವು ಹೆಚ್ಚುವರಿ ಸೌಲಭ್ಯಗಳು ದೊರೆಯಲಿವೆ. ಎಐ ನೆರವಿನ ಮೂಲಕ ನೈಜ-ಸಮಯದಲ್ಲಿ ಮಾತನಾಡುವ ಅಭ್ಯಾಸ ನಡೆಸುವ ಅವಕಾಶವೂ ಈ ಸೇವೆಯ ಪ್ರಮುಖ ವೈಶಿಷ್ಟ್ಯವಾಗಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾಷಾ ಕೌಶಲ್ಯವು ಶಿಕ್ಷಣ, ಉದ್ಯೋಗ ಹಾಗೂ ಜಾಗತಿಕ ಅವಕಾಶಗಳಿಗೆ ಪ್ರಮುಖ ಸಾಧನವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ಗುಣಮಟ್ಟದ ಡಿಜಿಟಲ್ ಕಲಿಕಾ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಏರ್‌ಟೆಲ್ ಈ ಸಹಭಾಗಿತ್ವವನ್ನು ರೂಪಿಸಿದೆ. ಇದರ ಮೂಲಕ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಭಾಷೆಗಳನ್ನು ಕಲಿಯುವುದರ ಜೊತೆಗೆ ನಿರಂತರ ಕಲಿಕೆಯ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ.
ಈ ಉಚಿತ ಸೂಪರ್ ಡ್ಯುಯೊಲಿಂಗೊ ಸೌಲಭ್ಯವು ಏರ್‌ಟೆಲ್ ಮೊಬೈಲ್, ವೈ-ಫೈ ಮತ್ತು ಡಿಟಿಎಚ್ ಗ್ರಾಹಕರಿಗೆ ಲಭ್ಯವಿರಲಿದೆ. ಗ್ರಾಹಕರು ಯಾವುದೇ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಲ್ಲಿಸುವ ಅಗತ್ಯವಿಲ್ಲದೆ, ನೇರವಾಗಿ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಡ್ಯುಯೊಲಿಂಗೊ ಇಂಡಿಯಾದ ಬಿಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥೆ ರಾಶಿ ಧನಾನಿ ಮಾತನಾಡಿ, “ಭಾರತವು ಡ್ಯುಯೊಲಿಂಗೊಗೆ ಅತ್ಯಂತ ಮಹತ್ವದ ಮಾರುಕಟ್ಟೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಕಾರ್ಯಪಡೆಯ ಅಗತ್ಯತೆಗಳಿಂದ ಭಾಷಾ ಕಲಿಕೆಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಭಾಷೆ ಕಲಿಯುವುದು ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು, ಆಸಕ್ತಿದಾಯಕವಾಗಬೇಕು ಮತ್ತು ದಿನನಿತ್ಯದ ಬದುಕಿನ ಭಾಗವಾಗಬೇಕು ಎಂಬುದು ನಮ್ಮ ಉದ್ದೇಶ,” ಎಂದು ಹೇಳಿದರು.
“ಏರ್‌ಟೆಲ್ ಜತೆಗಿನ ಈ ಸಹಭಾಗಿತ್ವವು ಸೂಪರ್ ಡ್ಯುಯೊಲಿಂಗೊವನ್ನು ದೇಶದ ಇನ್ನಷ್ಟು ದೊಡ್ಡ ಸಮುದಾಯಕ್ಕೆ ತಲುಪಿಸಲು ನೆರವಾಗಲಿದೆ. ಇದರಿಂದ ಭಾರತದಾದ್ಯಂತ ಇರುವ ಕಲಿಯುವವರಿಗೆ ಸುಧಾರಿತ ಕಲಿಕಾ ಅನುಭವ ದೊರೆಯುವುದರ ಜೊತೆಗೆ ನಿರಂತರವಾಗಿ ಅಭ್ಯಾಸ ಮಾಡಿ ಉತ್ತಮ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ,” ಎಂದು ಅವರು ತಿಳಿಸಿದರು.
ಸೂಪರ್ ಡ್ಯುಯೊಲಿಂಗೊ ಸಾಮಾನ್ಯ ಭಾಷಾ ಕಲಿಕೆಯ ಅನುಭವಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತದೆ. ಎಐ ಆಧಾರಿತ ಸಂಭಾಷಣೆಗಳ ಮೂಲಕ ನೈಜ-ಸಮಯದಲ್ಲಿ ಮಾತನಾಡುವ ಅಭ್ಯಾಸ ನಡೆಸಲು ಅವಕಾಶ ನೀಡುವುದರಿಂದ ಕಲಿಯುವವರು ಹೆಚ್ಚು ಆತ್ಮವಿಶ್ವಾಸದಿಂದ ಭಾಷೆಯನ್ನು ಬಳಸಲು ಸಾಧ್ಯವಾಗುತ್ತದೆ. ಪುನರಾವರ್ತಿತ ಅಭ್ಯಾಸ ಮತ್ತು ವೈಯಕ್ತೀಕರಿಸಿದ ಮಾರ್ಗದರ್ಶನದ ಮೂಲಕ ಭಾಷೆಯನ್ನು ಕೇವಲ ಪಾಠದ ಮಟ್ಟಕ್ಕೆ ಸೀಮಿತಗೊಳಿಸದೆ, ದೈನಂದಿನ ಜೀವನದಲ್ಲಿ ಸಕ್ರಿಯವಾಗಿ ಬಳಸುವಂತೆ ಪ್ರೋತ್ಸಾಹಿಸಲಾಗುತ್ತದೆ.
ಭಾರತೀಯ ಕಲಿಯುವವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಡ್ಯುಯೊಲಿಂಗೊ ತನ್ನ ಭಾಷಾ ಕೊಡುಗೆಗಳನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಇತ್ತೀಚೆಗೆ ಸಂಸ್ಥೆಯು ಪಂಜಾಬಿ ಭಾಷಿಕರಿಗಾಗಿ ಇಂಗ್ಲಿಷ್ ಕಲಿಕೆಯ ಕೋರ್ಸ್ ಅನ್ನು ಪರಿಚಯಿಸಿದೆ. ಇದು ಹಿಂದಿ, ಬೆಂಗಾಲಿ, ತೆಲುಗು, ತಮಿಳು ಮತ್ತು ಉರ್ದು ಭಾಷಿಕರಿಗಾಗಿ ಈಗಾಗಲೇ ಲಭ್ಯವಿರುವ ಕೋರ್ಸ್‌ಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಭಾರತದ ವೈವಿಧ್ಯಮಯ ಭಾಷಾ ಹಿನ್ನೆಲೆಯ ಕಲಿಯುವವರಿಗೆ ಅವರದೇ ಭಾಷೆಯಲ್ಲಿ ಸುಲಭವಾಗಿ ಶಿಕ್ಷಣವನ್ನು ತಲುಪಿಸುವ ಡ್ಯುಯೊಲಿಂಗೊದ ಬದ್ಧತೆಯನ್ನು ಈ ವಿಸ್ತರಣೆ ಪ್ರತಿಬಿಂಬಿಸುತ್ತದೆ.
ಗಮನಿಸಿ: ಈ ಪ್ರಯೋಜನವು ಪ್ರಸ್ತುತ ಲಭ್ಯವಿರುವ ಸೂಪರ್ ಡ್ಯುಯೊಲಿಂಗೊ ಚಂದಾದಾರಿಕೆ ನಿಯಮಗಳ ಆಧಾರದ ಮೇಲೆ 12 ತಿಂಗಳ ಅವಧಿಗೆ ಮಾತ್ರ ಅನ್ವಯವಾಗಲಿದೆ. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.
City Today News 9341997936
