ಸೆ. 28ರಿಂದ ಜ಼ೀ ಕನ್ನಡದಲ್ಲಿ ‘ಜಗದ್ಧಾತ್ರಿ’: ಮಹಿಳಾ ಪೊಲೀಸ್ ಅಧಿಕಾರಿಯ ಹೊಸ ಕಥೆ
ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ, ಕವಿತಾ ಗೌಡ ಕಿರುತೆರೆಗೆ ವಾಪಸ್

ಬೆಂಗಳೂರು, ಸೆಪ್ಟೆಂಬರ್ 26, 2026: ವಿಭಿನ್ನ ಕಥಾಹಂದರದ ಧಾರಾವಾಹಿಗಳ ಮೂಲಕ ಗಮನ ಸೆಳೆಯುತ್ತಿರುವ ಜ಼ೀ ಕನ್ನಡ ವಾಹಿನಿ ಇದೀಗ ಮಹಿಳಾ ಪೊಲೀಸ್ ಅಧಿಕಾರಿಯ ಹೋರಾಟದ ಕಥೆಯನ್ನು ‘ಜಗದ್ಧಾತ್ರಿ’ ಮೂಲಕ ಕಿರುತೆರೆಗೆ ತರಲು ಸಜ್ಜಾಗಿದೆ. ಸೆಪ್ಟೆಂಬರ್ 28ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಧಾರಾವಾಹಿ ಪ್ರಸಾರವಾಗಲಿದೆ.

ಮೋಕ್ಷಿತಾ ಪೈ ಜಗದ್ಧಾತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕುಟುಂಬದ ಜವಾಬ್ದಾರಿಗಳ ನಡುವೆಯೇ ಪೊಲೀಸ್ ಅಧಿಕಾರಿಯಾಗಿ ಅಪರಾಧಗಳ ವಿರುದ್ಧ ಹೋರಾಡುವ ಮಹಿಳೆಯ ಕಥೆ ಇದಾಗಿದೆ. ಅಪ್ಪಟ ದೇಶಭಕ್ತೆಯಾಗಿದ್ದ ತನ್ನ ತಾಯಿಯ ಮೇಲೆ ಬಂದಿರುವ ದೇಶದ್ರೋಹದ ಆರೋಪವನ್ನು ತೊಡೆದುಹಾಕಿ, ಆಕೆಗೆ ನ್ಯಾಯ ಕೊಡಿಸುವ ಹೋರಾಟವೂ ಕಥೆಯ ಪ್ರಮುಖ ಅಂಶವಾಗಿದೆ.
ಕುಟುಂಬದೊಳಗಿನ ಸಂಘರ್ಷ, ಪೊಲೀಸ್ ಕರ್ತವ್ಯ, ದೇಶಭಕ್ತಿ, ಆಕ್ಷನ್ ಹಾಗೂ ಪ್ರೇಮಕಥೆಯನ್ನು ಒಟ್ಟಿಗೆ ಕಟ್ಟಿಕೊಡಲಾಗಿದ್ದು, ಜಗದ್ಧಾತ್ರಿಯ ಎರಡು ವಿಭಿನ್ನ ಮುಖಗಳನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವ ಮಗಳಾಗಿ ಕಾಣಿಸಿಕೊಳ್ಳುವ ಆಕೆ, ಹೊರಜಗತ್ತಿನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾಳೆ.

ಧಾರಾವಾಹಿಯಲ್ಲಿ ವಿಜಯ್ ಲಲಿತಾ ಸೂರ್ಯ ಕೂಡ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಕ್ಷಿತಾ ಪೈ ಅವರೊಂದಿಗೆ ಅವರು ಕಾಣಿಸಿಕೊಂಡಿರುವ ಡ್ಯುಯೆಟ್ ಹಾಡಿನ ‘ಜಗದ್ಧಾತ್ರಿ ಹುಕ್ ಸ್ಟೆಪ್’ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
“ಈ ರೀತಿಯ ಪಾತ್ರವನ್ನು ಬಹಳ ದಿನಗಳಿಂದ ಮಾಡಿರಲಿಲ್ಲ. ಮತ್ತೆ ಪ್ರೀತಿ-ಪ್ರೇಮದ ಸುತ್ತ ಸಾಗುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿ ತಂದಿದೆ,” ಎಂದು ವಿಜಯ್ ಲಲಿತಾ ಸೂರ್ಯ ಹೇಳಿದ್ದಾರೆ.
ಕವಿತಾ ಗೌಡ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್, ಸೋನಿಯಾ ಪೊನ್ನಮ್ಮ ಹಾಗೂ ಮಾನಸಿ ಸುಧೀರ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.
ಬರಹಗಾರ ಮಹೇಶ್ ರಾವ್ ಹಾಗೂ ಪ್ರಕಾಶ್ ನಿರ್ಮಾಣದಲ್ಲಿ, ಮಹೇಶ್ ಸಾರಂಗ್ ನಿರ್ದೇಶನದಲ್ಲಿ ಧಾರಾವಾಹಿ ಮೂಡಿಬರುತ್ತಿದೆ. ಕೀರ್ತಿ ಅಕ್ಷಯ ನೆಟ್‌ವರ್ಕ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಜಗದ್ಧಾತ್ರಿ’ ಕೌಟುಂಬಿಕ ಭಾವನೆಗಳೊಂದಿಗೆ ಆಕ್ಷನ್ ಮತ್ತು ಪೊಲೀಸ್ ತನಿಖೆಯ ಅಂಶಗಳನ್ನೂ ಒಳಗೊಂಡಿದೆ.
ಜ಼ೀ ಕನ್ನಡ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, ಮಹಿಳೆಯರ ಬದುಕಿನಲ್ಲಿರುವ ವಿವಿಧ ಸವಾಲುಗಳನ್ನು ವಿಭಿನ್ನ ಕಥಾಹಂದರದ ಮೂಲಕ ವೀಕ್ಷಕರಿಗೆ ತಲುಪಿಸುವ ಉದ್ದೇಶದಿಂದ ‘ಜಗದ್ಧಾತ್ರಿ’ ರೂಪಿಸಲಾಗಿದೆ. ಹೊಸ ಅನುಭವದೊಂದಿಗೆ ವೀಕ್ಷಕರಿಗೆ ಮನರಂಜನೆ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
City Today News 9341997936
