ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ “ಆರಾಧನಾ” ಮಹೋತ್ಸವ

ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ “ಆರಾಧನಾ” ಮಹೋತ್ಸವದ ಆಹ್ವಾನಪತ್ರಿಕೆಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರಿಂದ ಸ್ವೀಕರಿಸಿದ ಹಿರಿಯ ಹಾಸ್ಯ ಚಿತ್ರನಟರಾದ ಶ್ರೀ ಉಮೇಶ್ ರವರು .ಈ ಸಂದರ್ಭದಲ್ಲಿ ಶ್ರೀ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.

City Today News 9341997936

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ

ದಿನಾಂಕ:-12/02/1935 ರಂದು ಹನ್ಯಾಳು ಗ್ರಾಮದಲ್ಲಿ ಜನಿಸಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ರುದ್ರಪಟ್ಟಣ & ಬಸವಪಟ್ಟಣದಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಹಾಸನದಲ್ಲಿ, ಬಿ ಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಾಗೂ ಎಲ್ ಎಲ್ ಬಿ ಯನ್ನು ಶಾರದ ವಿಲಾಸ್ ಮೈಸೂರಿನಲ್ಲಿ ಪಡೆದು ವಿದ್ಯಾರ್ಥಿ ಸಂಘದ ಚುನಾವಣೆಗೆ ಪ್ರತಿನಿಧಿಸುವ ಮೂಲಕ ಅಂದಿನ ಕಾಲದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ನಂತರ 16 ಮೇ 1962 ರಂದು ದೇವರಹಟ್ಟಿ ಅಷ್ಟೇಗೌಡರ ಹಾಗೂ ಮಾಯಮ್ಮ ದಂಪತಿಗಳ ಹಿರಿಯ ಪುತ್ರಿಯಾದ (ಇಂದಿನ ಅರಕಲಗೂಡು ಕ್ಷೇತ್ರದ ಶಾಸಕರಾದ ಶ್ರೀಯುತ ಎ ಮಂಜುರವರ ಅಕ್ಕ) ಕಮಲಮ್ಮರವರ ಜೊತೆ ರಾಮನಾಥಪುರದ ರಾಮೇಶ್ವರ ದೇವಾಲಯದಲ್ಲಿ ವಿವಾಹವಾದರು. ನಂತರ 1962ರ ಅರಕಲಗೂಡು ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಜಿ.ಎ. ತಿಮ್ಮಪ್ಪ ಗೌಡರ ವಿರುದ್ಧ ಸೋತಿದ್ದರು. ನಂತರ 1967ರಲ್ಲಿ ಅರಕಲಗೂಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರ ವಿರುದ್ಧ ಗೆಲುವು ಸಾಧಿಸಿದರು.

ಆ ಕಾಲದಲ್ಲಿ ಹೇಮಾವತಿ ಡ್ಯಾಮ್ ಕಟ್ಟುವಾಗ ಮುಳುಗಡೆಯಾದ ನಿರಾಶ್ರಿತರಿಗೆ 50 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟು ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಅನಂತರ 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರನ್ನು ಎರಡನೇ ಬಾರಿಗೆ ಸೋಲಿಸಿದ್ದು, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರವರ ಸಂಪುಟ ಸೇರಿ ನೀರಾವರಿ ಸಚಿವರಾಗಿದ್ದು, ಹಾರಂಗಿ ಜಲಾಶಯ ನೀರನ್ನು ಅರಕಲಗೂಡು ತಾಲೂಕಿನ ರೈತರಿಗೆ ಕಾಲುವೆಗಳ ಮುಖಾಂತರ ನೀರು ಹರಿಯುವಂತೆ ಮಾಡಿ ಅರಕಲಗೂಡು ಭಾಗದ ಜನಕ್ಕೆ ನೀರಾವರಿ ಸೌಲಭ್ಯ ಒದಗಿಸಿದ ಭಗೀರಥರಾದರು.

ಅರಕಲಗೂಡು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಲು ಸಹಕರಿಸಿದರು ಹಾಗೂ ಹೇಮಾವತಿ ಜಲಾಶಯ ಯೋಜನೆ ಜಾರಿಯಾಗಿದ್ದ ಆ ಸಂದರ್ಭದಲ್ಲಿ ಹಿನ್ನೀರಿನ ಸಮರ್ಪಕ ಬಳಕೆಗೆ ಹಲವು ಚೆಕ್ ಡ್ಯಾಮ್ ನಿರ್ಮಿಸಲು ಕಾರಣೀ ಭೂತರಾಗಿದ್ದರು. ನಂತರ 1980 ರಿಂದ 1989 ರವರೆಗೆ ಎರಡು ಬಾರಿಗೆ ಹಾಸನ ಲೋಕಸಭೆಯಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು ಆ ಸಂದರ್ಭದಲ್ಲಿ ನೀರಾವರಿ ವಿಷಯಗಳ ಸಂಬಂಧಿಸಿದಂತೆ ಅದರಲ್ಲೂ ಕಾವೇರಿ ಜಲ ವಿವಾದಗಳು ಸಂಭವಿಸಿದಾಗ ಮಾನ್ಯರು ಅಂದಿನ ರಾಜ್ಯದ ಮುಖ್ಯಮಂತ್ರಿಗಳೊಡಗೂಡಿ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಹಲವು ಬಾರಿ ರಾಜ್ಯಕ್ಕೆ ಬಂದೊದಗುತ್ತಿದ್ದ ಹಲವಾರು ತೊಡಕುಗಳನ್ನು ಬಗೆಹರಿಸಿದ್ದರು.

ಶ್ರೀಯುತ ಚನ್ನಬಸಪ್ಪನವರ ಶಿಷ್ಯರಾಗಿದ್ದ ನಂಜೇಗೌಡರು ರಾಜ್ಯದ ನೀರಾವರಿ ವಿಷಯಗಳ ಬಗ್ಗೆ ಅಗಾಧವಾದ ಜ್ಞಾನಪಡೆದಿದ್ದ ಇವರು ದುರದೃಷ್ಟವಶಾತ್ ಸನ್ಮಾನ್ಯರ ನೇರ ದಿಟ್ಟ ನುಡಿಯೇ ಅವರಿಗೆ ಮುಳುವಾಗಿದ್ದಕ್ಕೆ ಹಲವು ನಿದರ್ಶನಗಳಿವೆ. ಒಮ್ಮೆ 1987ರಲ್ಲಿ ಸಂಸತ್ ಭವನದ ಭಾಷಣದಲ್ಲಿ ಸ್ವಪಕ್ಷೀಯರ ವಿರುದ್ಧ ಬೊಫೋರ್ಸ್ ಹಗರಣದ ಬಗ್ಗೆ ಧ್ವನಿಯೆತ್ತಿ ಸ್ವಪಕೀಯರ ವಿರೋದಕ್ಕೆ ಗುರಿಯಾಗಿದ್ದರು.

ನಂತರ 1994ರಲ್ಲಿ ಬಿಜೆಪಿಯಿಂದ ಬಸವನಗುಡಿಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದರು. ಇವರ ಹೆಸರಿನಲ್ಲಿ ಈಗಲೂ ಬಸವನಗುಡಿಯ ಒಂದು ರಸ್ತೆಗೆ ಹೆಸರಿಟ್ಟಿರುವುದು ಅವರ ಸಾಧನೆಯ ಕೈಗನ್ನಡಿಯಾಗಿದೆ. ಹೆಚ್‌ಎನ್ ನಂಜೇಗೌಡರವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಎಸ್ ಎಂ ಕೃಷ್ಣ, ರವರು ಕೆ.ಎಚ್ ಪಟೇಲರು, ಬೊಮ್ಮಾಯಿಯವರು ಹೀಗೆ ಹಲವಾರು ಗಣ್ಯಾತಿ ಗಣ್ಯರೊಡನೆ ನೀರಾವರಿ ವಿಷಯ ಬಂದಾಗ ಸಲಹೆಗಳನ್ನು ನೀಡುತ್ತಿದ್ದರು.

1994ರ ನಂತರ ರಾಜಕೀಯವಾಗಿ ಏಳುಬೀಳುಗಳನ್ನು ಕಂಡರು ಯಾವುದೇ ಪಕ್ಷದ ಯಾರೇ ಅಧಿಕಾರದಲ್ಲಿದ್ದರೂ ಕಾವೇರಿ ವಿವಾದ ತಲೆದೋರಿದಾಗ ಮಾನ್ಯ ನಂಜೇಗೌಡರ ಸಲಹೆ ಪಡೆದೇ ಮುಂದಿನ ರೂಪರೇಷೆ ರಚಿಸುತ್ತಿದ್ದ ಹಲವಾರು ನಿದರ್ಶನಗಳಿವೆ. ಇವರು ದಿನಾಂಕ 19 ಡಿಸೆಂಬರ್ 2008ರಲ್ಲಿ ಇಹಲೋಕ ತ್ಯಜಿಸಿ ಜನಮನದಲ್ಲಿ ಅಜರಾಮರರಾದರು.

ಹಲವಾರು ವರ್ಷಗಳ ನಂತರ ಮಾನ್ಯರ ಬಗ್ಗೆ ಕಾರ್ಯಕ್ರಮವನ್ನು ದಿನಾಂಕ 11.08.2024 ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ಒಕ್ಕಲಿಗ ಸಂಘದ ಕ್ಯಾಂಪಸ್ ನಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ ನಡೆಸುತ್ತಿರುವುದು ಹಾಸನ ಭಾಗದ ಜನತೆಗೆ ಒಂದು ಸಂತೋಷದ ಸಂಗತಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೆಚ್.ಎನ್. ನಂಜೇಗೌಡರ ಅಭಿಮಾನಿ ವೃಂದ ದ ವತಿಯಿಂದ ತಿಳಿಸಲಾಯಿತು.

City Today News 9341997936

ಜಯನಗರ ರಾಯರ ಮಠದಲ್ಲಿ ಯಶಸ್ವಿಯಾಗಿ ಜರುಗಿದ ಟಿ ಟಿ ಡಿ ಕಾರ್ಯಕ್ರಮ ಪ್ರವಚನದ ಮಂಗಳ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 6 ರಿಂದ 9ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಹರಿ ಭಜನೆ, ಮ||ಶಾ||ಸಂ|| ಶ್ರೀ ಬ್ರಹ್ಮಣ್ಯಾಚಾರ್ಯರಿಂದ “ಶ್ರೀಮದ್ಭಾಗವತ ರತ್ನ ಶ್ರೀ ಪ್ರಹ್ಲಾದರಾಜರ ವೈಭವ” ವಿಷಯವಾಗಿ ಧಾರ್ಮಿಕ ಪ್ರವಚನ, ಶ್ರೀಮತಿ ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ, ಆಗಸ್ಟ್ 8, ಗುರುವಾರ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಸುಮಾರು ಐದು ಸಾವಿರ ಜನರಿಗೆ ಅನ್ನದಾನ ಸೇವೆ,  ಸಂಜೆ ಕಾರ್ಯಕ್ರಮದಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ ತೊಟ್ಟಿಲು ಸೇವೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಮತ್ತು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ವಾನ್ – ಬ್ರಹ್ಮಣ್ಯ ಆಚಾರ್ಯರಿಗೆ ಶ್ರೀ ಮಠದ ಪರವಾಗಿ ಆರ್ ಕೆ ವಾದಿಂದ್ರಚಾರ್ಯರು ಮತ್ತು ನಂದಕಿಶೋರಾಚಾರ್ಯರು ಸನ್ಮಾನಿಸಿದರು ಈ ವಿಶೇಷ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಶ್ರೀ ಸುಧೀಂದ್ರ  ದೇಸಾಯಿಯವರು ಮತ್ತು ಶ್ರೀಮಠದ ಸಿಬ್ಬಂದಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ದೇಶಪ್ರೇಮ ರಾಜ್ಯಾಭಿಮಾನಗಳನ್ನು ಅಭಿವ್ಯಕ್ತಿಗೊಳಿಸಿರುವ  “ಆಲ್ಬಮ್ ವಿಡಿಯೋ ” ಉದ್ಘಾಟನೆ

ಶತಮಾನಗಳಿಂದ ಈ ದೇಶದ ಪ್ರಜೆಗಳಾಗಿದ್ದರೂ ನಾಗರಿಕ ಮತ್ತು ಮಾನವ ಹಕ್ಕುಗಳು ಕೌಟುಂಬಿಕ, ಸಾಮಾಜಿಕ ಸ್ಥಾನಮಾನಗಳಿಂದ  ವಂಚಿತರಾಗಿ, ಅಭದ್ರತೆಯಿಂದ  ಅಸಡ್ಡೆಗೆ ಒಳಗಾಗಿರುವ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯಕ್ಕೆ ನಮ್ಮ ದೇಶದ ಸಂವಿಧಾನ, ಕಾನೂನು ಮತ್ತು ನ್ಯಾಯ ವ್ಯವಸ್ಥೆಯು ನಾಗರಿಕ ಮತ್ತು ಮಾನವ ಹಕ್ಕುಗಳನ್ನು ಕೊಡ ಮಾಡಿ ದೇಶದ ಸಮಾನ ಪ್ರಜೆಗಳು ಎಂದು ಘೋಷಿಸಿವೆ.
ದೇಶಭಕ್ತಿ ರಾಜ್ಯಾಭಿಮಾನಗಳು ಗಂಡು ಹೆಣ್ಣುಗಳ ಸೊತ್ತಷ್ಟೇ ಅಲ್ಲದೆ ನಮ್ಮಲ್ಲಿಯೂ ರಾಷ್ಟ್ರಪ್ರೇಮ,ರಾಜ್ಯ ಭಕ್ತಿ ಅಣುವಣುವಿನಲ್ಲಿ ತುಂಬಿದೆ ಎಂದು ಸಾರಿ ಸಾರಿ ಹೇಳಲು 9ನೇ,ಆಗಸ್ಟ್ 2024 ರಂದು ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ತಮ್ಮ ನೈಜ ಧ್ವನಿಯಲ್ಲಿ ಹಾಡಿ ದೇಶವು ನಮ್ಮದು ರಾಜ್ಯವು ನಮ್ಮದು ಇಂದು ತಮ್ಮ ದೇಶಪ್ರೇಮ ರಾಜ್ಯಾಭಿಮಾನಗಳನ್ನು ಅಭಿವ್ಯಕ್ತಿಗೊಳಿಸಿರುವ  “ಆಲ್ಬಮ್ ವಿಡಿಯೋ ” ಉದ್ಘಾಟನೆ ಗೌರವಾನ್ವಿತ ಶ್ರೀಯುತ.ಶ್ರೀಮತಿ ಮಾರ್ಗರೆಟ್ ಆಳ್ವ ಘನತೆವೆತ್ತ ಮಾಜಿ ರಾಜ್ಯಪಾಲರು, ಬೆಂಗಳೂರು ಮತ್ತು  ಅನೇಕ ಸಾಂವಿಧಾನಿಕ ಸಂಸ್ಥೆಗಳ ರೂವಾರಿಗಳ ಘನ ಉಪಸ್ಥಿತಿಯಲ್ಲಿ  ಲೋಕಾರ್ಪಣೆ ಆಗಲಿದೆ.

ಹಾಗೆಯೇ  ನಮ್ಮ ಕರುನಾಡ ನೆಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರಿಂದ ರಚನೆಗೊಂಡಿರುವ ಈ ಸಮುದಾಯದ ವಿಷಯ ವಸ್ತುವನ್ನೇ ಒಳಗೊಂಡಿರುವ 10 ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವುದು ಅದ್ಭುತ ಘಟ್ಟಕ್ಕೆ ಸಾಕ್ಷಿಭೂತವಾಗಲಿದೆ.

ನಮ್ಮ ಸಮುದಾಯದ ಹಿರಿಯರು, 55 ವರ್ಷಗಳಿಗೂ ಅಧಿಕ ವಯಸ್ಸಿನವರ ತಂಡ ಒಂದು ವಿನೂತನ ಮತ್ತು ವಿಶೇಷವಾದ “ತಲ್ಕಿ ” ಎಂಬ ನಾಟಕವನ್ನು ಪ್ರದರ್ಶಿಸುತ್ತಿದ್ದು, ಈ ಮೂಲಕ ತಮ್ಮ ಭಾವನೆಗಳು, ಹೋರಾಟ ಮತ್ತು ಅಭಿವ್ಯಕ್ತಿಗಳನ್ನು ನವರಸ ಭರಿತವಾಗಿ  ಹಂಚಿಕೊಳ್ಳಲಿದ್ದಾರೆ ಎಂದು ಅಕ್ಕೈ ಪದ್ಮಶಾಲಿ, ಚಾಂದಿನಿ, ಕ್ರಿಸ್ಟಿರಾಜ್ ಮತ್ತು ಉಮಾ ರವರುಗಳ ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಲಾಯಿತು.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳವರ “353ನೇ ಆರಾಧನಾ ಮಹೋತ್ಸವ”- ರಾಯರ ಸನ್ನಿಧಿಯಲ್ಲಿ ಪೂರ್ವಭಾವಿ ಸ್ವಯಂ ಸೇವಕರ ಸಭೆ

ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ1008 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆರಾಧನೆಯ ಪೂರ್ವಭಾವಿಯಾಗಿ ಸ್ವಯಂಸೇವಕರ ಸಭೆಯ ಅಂಗವಾಗಿ ವೇದಘೋಷ, ಕೊಳಲುವಾದನ, ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಆರ್. ಕೆ.  ವಾದೀಂದ್ರಾಚಾರ್ಯರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಬಗ್ಗೆ ಪ್ರಸ್ತಾಪಿಸಿ, ಆಗಸ್ಟ್18 ರಂದು ಸಂಜೆ 6-30ಕ್ಕೆ ಉಡುಪಿಯ ಕಾಣಿಯೂರು ಮಠದ ಪರಮಪೂಜ್ಯ1008 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು “ಉದ್ಘಾಟನೆ” ಮಾಡಲಿದ್ದಾರೆ ಎಂದು ತಿಳಿಸಿದರು. ತದನಂತರ ಸುಮಾರು ವರ್ಷಗಳಿಂದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಭಕ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು  ಮುಕ್ತವಾಗಿ ಹಂಚಿಕೊಂಡು ಶ್ರೀಮಠದ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ತಿಳಿದು ಸಂತೋಷ ವ್ಯಕ್ತಪಡಿಸಿದರು  ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಸಪ್ತರಾತ್ರೋತ್ಸವ ಉತ್ಸವದ ಅಂಗವಾಗಿ ದಿನಾಂಕ 18-8-2024  ರಿಂದ 24-82024 ವರೆಗೆ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಭಕ್ತರಿಗೆ ಅನ್ನಸಂತರ್ಪಣೆ, ಉತ್ಸವಗಳು, ಪ್ರವಚನ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಶ್ರೀಮತಿ ಮೇಘ ಶಿವಕುಮಾರ್ (ಹರಿದಾಸವಾಣಿ), ವಿದ್ವಾನ್ ಶ್ರೀ ಪ್ರಾದೇಶಾಚಾರ್ಯ (ಹರಿದಾಸ ಮಂಜರಿ), ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್-ಅಶೋಕ್ (ಹರಿನಾಮ ಘೋಷ),  ವಿದ್ವಾನ್ -ಜಯತೀರ್ಥ ಮೇವುಂಡಿ (ಹರಿನಾಮ ಸಂಕೀರ್ತನೆ), ವಿದ್ವಾನ್ ಶ್ರೀ ಶೇಷಗಿರಿದಾಸ್ ರಾಯಚೂರು (ದಾಸರ ಪದಗಳ ಗಾಯನ), ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ (ಭರತನಾಟ್ಯ), ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ ಪ್ರವಚನ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ 353ನೇ “ಆರಾಧನಾ” ಮಹಾರಥೋತ್ಸವವು ಭಕ್ತಾದಿಗಳ ಸಹಕಾರದೊಂದಿಗೆ ಅತ್ಯಂತ ಸಂಭ್ರಮ ಸಡಗರ ವಿಜೃಂಭಣೆಯಿಂದ ನೆರವೇರಿಸಲು ಉದ್ದೇಶಿಸಿದ್ದು, ಈ ಸಂದರ್ಭದಲ್ಲಿ ಶ್ರೀ ಗುರುರಾಯರ ಸನ್ನಿಧಿಗೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರು ತಿಳಿಸಿದರು, ಸ್ವಯಂಸೇವಕರ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಿಬ್ಬಂದಿಗಳು ಹಾಗೂ ಶ್ರೀ ಮಧುರನಾಥ್, ಡಾ|| ಶ್ರೀಧರ್, ಸುರೇಶ್ , ವಿಜಯ್ ಕುಮಾರ್, ಶ್ರೀನಾಥ್, ಇಂಜಿನಿಯರ್ ಶ್ರೀಧರ್, ಜಯಂತಿ ರಾಘವೇಂದ್ರ, ಉಷಾ ಮೋಹನ್, ಎ ಸಂತೋಷ್, ರಾಜೇಶ್ ಕುಲಕರ್ಣಿ, ಇನ್ನೂ ಮುಂತಾದ  ನೂರಾರು ಸ್ವಯಂ ಸೇವಕರು ಭಾಗವಹಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936