ರಾಜ್ಯ ಸರ್ಕಾರದಿಂದ ಅತಿಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯ

  • ಪಂಚಮಸಾಲಿಗಳು ಸೇರಿ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಇದು ಅತಿಹಿಂದುಳಿದ ವರ್ಗಗಳಿಗೆ ಮಾಡುವ ಘೋರ ಅನ್ಯಾಯವಾಗಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೇವಲ ವೀರಶೈವ ಲಿಂಗಾಯತ ಪಂಚಮಸಾಲಿಗಳನ್ನು ಓಲೈಸಲು ಹೊರಟಿದ್ದು ಆ ಸಮುದಾಯಕ್ಕೆ ಶೇ.15 ರಷ್ಟು ಮೀಸಲಾತಿ ದೊರಕಿಸಿಕೊಡಲು ಹೊರಟರೆ ಪ್ರಸ್ತುತ ಪ್ರವರ್ಗ 2ಎ ಪಟ್ಟಿಯಲ್ಲಿರುವ 102ಕ್ಕೂ ಹೆಚ್ಚು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತವೆ. ಬಲಿಷ್ಠ ಸಮಾಜಕ್ಕೆ ಪೂರ್ತಿ ಮೀಸಲಾತಿ ಸವಲತ್ತು ಹೊರೆತು ಸಣ್ಣ ಅತಿಸಣ್ಣ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಮೀಸಲಾತಿಯ ಸಾಂವಿಧಾನಿಕ ಆಶಯವೇ ಮಣ್ಣು ಪಾಲಾಗಲಿದೆ. ಇದನ್ನು ಖಂಡಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲವಾಗಿರುವ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮುದಾಯ ಮತ್ತು ಅದರೊಳಗಿನ ಉಪಜಾತಿಗಳನ್ನು 2ಎ ಪಟ್ಟಿಗೆ ಸೇರ್ಪಡೆ ಮಾಡಿದರೆ ಪ್ರವರ್ಗ 2ಎ ಮೀಸಲಾತಿ ಪಟ್ಟಿಯಲ್ಲಿರುವ ಕೃತಿಯ ಜನಾಂಗ ಮತ್ತು ನಮ್ಮ ಉಪಜಾತಿಗಳು ಸೇರಿ ಅತಿ ಹಿಂದುಳಿದ 102ಕ್ಕೂ ಹೆಚ್ಚು ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ನಾವು ಸಹಿಸಲು ಸಾಧ್ಯವಿಲ್ಲ.

  • ವೀರಶೈವ-ಲಿಂಗಾಯತ-ಪಂಚಮಸಾಲಿ ಸಮುದಾಯ ಒಂದೇ ಜಾತಿಯಾಗಿ ಗುರುತಿಸಿಕೊಂಡಿರುವುದು ಮತ್ತು ರಾಜ್ಯದ ರಾಜಕೀಯ, ಶಿಕ್ಷಣ, ಉದ್ಯಮ ಎಲ್ಲಾ ವಲಯದಲ್ಲಿ ಪ್ರಬಲವಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವೇ ಬಹುತೇಕ ರಾಜ್ಯ ರಾಜಕಾರಣವನ್ನು ನಿಯಂತ್ರಿಸುತ್ತ ಬಂದಿದೆ. ಶೇ.50ಕ್ಕೂ ಹೆಚ್ಚು ರಾಜಕೀಯ ಪಾಲು ಈ ಸಮುದಾಯ ಪಡೆದಿದೆ. ಹತ್ತಾರು ಮಠಗಳು ಸರ್ಕಾರದಿಂದ ದೊಡ್ಡ ಪ್ರಯೋಜನ ಪಡೆಯುತ್ತಾ ಬಂದಿವೆ. ಪ್ರತಿವರ್ಷ ಈಗಲೂ ನೂರಾರು ಕೋಟಿ ಅನುದಾನ ಪಡೆಯುತ್ತಿವೆ. ಲಿಂಗಾಯತ ಸಮುದಾಯದ ಜನಪ್ರತಿನಿಧಿಗಳು ಶೇ 25ಕ್ಕೂ ಹೆಚ್ಚು ಮಂದಿ ವಿಧಾನಸಭೆಗೆ ಆಯ್ಕೆ ಆಗುತ್ತಿದ್ದಾರೆ ( 2018ರಲ್ಲಿ 58 ಶಾಸಕರು). ವಿಧಾನಪರಿಷತ್, ಲೋಕಸಭೆಗೂ ರಾಜ್ಯದಿಂದ ಅತಿ ಹೆಚ್ಚು ಅದೇ ಸಮುದಾಯ ಆಯ್ಕೆ ಆಗುತ್ತಿದೆ. ರಾಜ್ಯದ ಪ್ರಬಲ ಭೂಮಾಲೀಕತ್ವವೂ ಅದೇ ಸಮುದಾಯದವರ ಕೈನಲ್ಲಿದೆ. ಬೃಹತ್ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಉದ್ಯೋಗ, ಆಡಳಿತರಂಗ ಹೀಗೆ ಲಿಂಗಾಯತ ಸಮುದಾಯ ಮತ್ತು ಅದರ ಉಪಜಾತಿಗಳು ಎಲ್ಲಾ ವಲಯದಲ್ಲಿ ಸಿಂಹಪಾಲು ಹೊಂದಿವೆ. ಇದರಿಂದ ಆ ಸಮಾಜ ಸಹಜವಾಗಿಯೇ ಬಲಿಷ್ಠವಾಗಿದೆ. ಹೀಗಿದ್ದಾಗ್ಯೂ ಅತೀ ಹಿಂದುಳಿದ ಸಮುದಾಯ ಎಂದು ಹೇಳಿಕೊಳ್ಳುವುದು ಅರ್ಥಹೀನವಾಗಿದೆ. ಮತ ಬ್ಯಾಂಕ್‌ಗಾಗಿ ಬಿಜೆಪಿ ಸೇರಿ ರಾಜಕೀಯ ಪಕ್ಷಗಳು ಪಂಚಮಸಾಲಿ ಮತ್ತು ವೀರಶೈವ ಲಿಂಗಾಯತರ 2ಎ ಪ್ರಸ್ತಾವನೆಗೆ ಕುಮ್ಮಕ್ಕು ನೀಡುತ್ತಿರುವುದು ಅತಿ ಹಿಂದುಳಿದ ವರ್ಗಗಳು ದಮನ ಮಾಡಲು ಪ್ರಯತ್ನಿಸಿದಂತೆಯೇ ಸರಿ.
  • ಬಲಿಷ್ಠವಾಗಿ ಬೆಳೆದು ರಾಜ್ಯದ ಮೇಲ್ವರ್ಗದಾಗಿ ಗುರುತಿಸಿಕೊಂಡರೂ ಪ್ರವರ್ಗ ‘2ಎ’ಗೆ ಸೇರಲು ಹವಣಿಸುತ್ತಿರುವುದು ಆ ಪ್ರವರ್ಗಕ್ಕೆ ಮೀಸಲಿರುವ ಶೇ. 15 ರಷ್ಟು ಮೀಸಲು ಕಬಳಿಸಲು ಎಂಬುದು ಎಂತವರಿಗಾದರೂ ಅರ್ಥವಾಗುವಂತದ್ದಾಗಿದ್ದು ಇದಕ್ಕೆ ಬಿಜೆಪಿ ಪ್ರೋತ್ಸಾಹ ನೀಡುತ್ತಿರುವುದು ಅತಿ ಹಿಂದುಳಿದ ವರ್ಗಗಳಿಗೆ ದನಿ ಇಲ್ಲದ ಸಮುದಾಯಗಳಿಗೆ ವಂಚನೆ ಮಾಡುವ ಧೋರಣೆಯಾಗಿದೆ.
  • ಪ್ರವರ್ಗ 2ಎ ಪಟ್ಟಿಯಲ್ಲಿರುವ 102 ಜಾತಿಗಳ ಪೈಕಿ ಬೆರಣಿಕೆಯನ್ನು ಸಮುದಾಯಗಳು ಬಿಟ್ಟು ಇತರೆ ಯಾವುದೇ ಸಮುದಾಯ ಈವರೆಗೂ ನ್ಯಾಯಬದ್ಧ ಹಕ್ಕು ಪಡೆದುಕೊಂಡಿಲ್ಲ. ಅನೇಕ ಸಣ್ಣ ಅತಿ ಸಣ್ಣ ಸಮುದಾಯಗಳು ಇಂದಿಗೂ ನಿಕೃಷ್ಣ ಸ್ಥಿತಿಯಲ್ಲಿ ಬದುಕುತ್ತಿವೆ. ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಸಾಮಾಜಿಕವಾಗಿ ಸುಧಾರಣೆಯಾಗದೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿವೆ, ಕುಂಬಾರ, ಮಡಿವಾಳ, ಸವಿತಾ, ಗಾಣಿಗ, ಹಳೆಪೈಕ, ದೇವಾಂಗ ಇಂತಹ ಸಮಾಜಗಳಲ್ಲದೆ ಕ್ಷತ್ರಿಯ ಸಮುದಾಯದ ರಾಮ ಕ್ಷತಿಯ, ಕೋಟೆ ಕೃತಿಯ ಸೋಮವಂಶ ಕ್ಷತ್ರಿಯ, ರಾಜು ಕ್ಷತ್ರಿಯ, ಕುಮಾರ ಕ್ಷತ್ರಿಯ, ಕುಮಾರ ಪಂತ್‌ ಕೃತಿಯ ಸೋಮವಂಶ ಸಹಸ್ರಾರ್ಜುನ ಕೃತಿಯ ಭಾವಸಾರ ಕ್ಷತ್ರಿಯ, ಪತ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ, ತಿಗಳ, ನಯನಜ ಕ್ಷತ್ರಿಯ ಹೀಗೆ ಅನೇಕ ಜಾತಿಗಳು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿವೆ. ಪಂಚಮಸಾಲಿಗಳನ್ನು ಮತ್ತು ಲಿಂಗಾಯತರನ್ನು ಪ್ರವರ್ಗ 2ಎಗೆ ಸೇರಿಸಿದರೆ ಈ ಸಮುದಾಯಗಳಿಗೆ ಮೀಸಲಾತಿ ಬಾಗಿಲು ಸಂಪೂರ್ಣ ಮುಚ್ಚಿ ಹೋಗುತ್ತದೆ.
  • ಪ್ರಬಲ ಸಮುದಾಯ 2ಎ ಪಟ್ಟಿಯಲ್ಲಿರುವ ನಮ್ಮ ಪಾಲನ್ನು ಕಬಳಿಸಲು ಬಂದರೆ ನಾವೆಲ್ಲಿ ಹೋಗಬೇಕು? ಪರ್ಯಾಯ ವ್ಯವಸ್ಥೆ ಆಗದೆ ಬಲಿಷ್ಠ ಸಮಾಜವನ್ನು ದುರ್ಬಲ ಸಮುದಾಯಗಳ ನಡುವೆ ತಂದು ಬಿಟ್ಟರೆ ನಾವು ಉಳಿಯುವುದು ಸಾಧ್ಯವೇ? ಇದನ್ನು ಒಪ್ಪಲು ಎಂದಿಗೂ ಸಾಧ್ಯವಿಲ್ಲ.
  • ಬಿಜೆಪಿ ಸಮಸ್ತ ಹಿಂದುಗಳ ಹೆಸರಿನಲ್ಲಿ ಹಿಂದುತ್ವದ ಮೂಲಕ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಲಿಂಗಾಯತರಿಂದಲ್ಲ. ಕೇವಲ ಲಿಂಗಾಯತ ಪಕ್ಷ ಅನ್ನುವುದಾದರೆ ಅದನ್ನು ಬಹಿರಂಗವಾಗಿ ಘೋಷಣೆ ಮಾಡಲಿ ಇಲ್ಲವೇ 2ಎ ಮೀಸಲಾತಿ ಪ್ರಸ್ತಾವನೆಗೆ ಉತ್ತೇಜನ ಮಾಡುವುದನ್ನು ಬಿಡಲಿ, ಅವೈಜ್ಞಾನಿಕ ಅಂಶಗಳನ್ನು ಮುಂದಿಟ್ಟುಕೊಂಡು ಲಿಂಗಾಯತ ಒಳಪಂಗಡಗಳು ಹಿಂದುಳಿದಿವೆ ಎಂದರೆ ಅದಕ್ಕೆ ಕಿಮ್ಮತ್ತಿಲ್ಲ.
  • ಪಂಚಮಸಾಲಿಗಳು ಮತ್ತು ಸಮಸ್ತ ಲಿಂಗಾಯತರು ವೀರಶೈವ ಲಿಂಗಾಯತರ ಹೆಸರಿನಲ್ಲಿ 3ಬಿ ಪ್ರವರ್ಗದಲ್ಲಿರುವುದು ಸಮಂಜಸವಾಗಿದೆ. ಅತೀ ಹಿಂದುಳಿದ ವರ್ಗಗಳ ಪಾಲು ಕಸಿದುಕೊಂಡು ಹೆಚ್ಚು ಹೆಚ್ಚು ಮೀಸಲಾತಿ ಪ್ರಯೋಜನ ಪಡೆಯಲು ಎ ಪ್ರವರ್ಗದ ಶೇ.15ರ ಮೀಸಲಾತಿ ಮೇಲೆ ಕಣ್ಣು ಹಾಕಿದರೆ ದುರ್ಬಲ ವ್ಯಕ್ತಿಯ ಅನ್ನ ಕಸಿದಂತೆಯೇ ಸರಿ. ದುರ್ಬಲರನ್ನು ಮೇಲೆತ್ತುವುದರ ಬದಲು ಸರ್ಕಾರ ಅವರನ್ನು ತುಳಿಯಲು ಹೊರಟರೆ ಅಮಾನವೀಯವಾಗುತ್ತದೆ.
  • 2ಎ ಪ್ರವರ್ಗಕ್ಕೆ ಲಿಂಗಾಯತ ಒಳಪಂಗಡಗಳನ್ನು ಸೇರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ಸಂಬಂಧ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಳ್ಳಲಿದೆ. ಘನತೆವೆತ್ತ ರಾಜ್ಯಪಾಲರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಉದಯ ಸಿಂಗ್ ರಾಜ್ಯಾಧ್ಯಕ್ಷರು-ಕರ್ನಾಟಕ ಕ್ಷತ್ರಿಯ ಒಕ್ಕೂಟ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .

City Today News

9341997936

ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಸೆಪ್ಟಂಬರ್ 27ರಂದು ನಾವು ಸುಮಾರು 18 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿನಾಂಕ:27-09 2022 ರಂದು ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆಯ ಬಗ್ಗೆ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ಎಂ.ಮುನಿಮಾರಪ್ಪ ಮಾತನಾಡಿ, ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಂದು ಕಮಿಷನ್ ಸರ್ಕಾರವಾಗಿ ಭ್ರಷ್ಟಾಚಾರದ ಕೂಪದಲ್ಲಿಯೇ ಮುಳುಗಿದೆ. ರಾಜ್ಯದ ಶೋಷಿತ ಸಮುದಾಯಗಳ ಬಗ್ಗೆ ಹಾಗೂ ಅವರ ಹೋರಾಟಗಳ ಬಗ್ಗೆ ಕಿಂಚಿತ್ತೂ ಕಾಳಜೀ ಇಲ್ಲದಂತಾಗಿದೆ. ಬಹುಶ: ರಾಜ್ಯ ಸರ್ಕಾರಕ್ಕೆ ಹೋರಾಟಗಳನ್ನು ಗಂಭೀರವಾಗಿ ಪರಿಗಣಿಸಲೂ ಕೂಡ ಕಮಿಷನ್ ನೀಡಿಬೇಕೆನಿಸುತ್ತದೆ. ಸರ್ಕಾರ ಹೀಗೆ ದಲಿತರ ಹೋರಾಟ, ಪ್ರತಿಭಟನೆಗಳನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತದೆ. “ಆಪರೇಷನ್ ಕಮಲ” ಮಾಡಿದರೂ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಆಗುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಮುನಿರಾಜು ಮಾತನಾಡಿ ಇದೇ ತಿಂಗಳ 27ರಂದು ನಾವು ಸುಮಾರು 18 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸ್ಥಳಕ್ಕೆ ಮುಖ್ಯಮಂತ್ರಿಗಳು ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಸಭೆ ಕರೆಯದೇ ಹೋದರೆ ರಾಜ್ಯಾದ್ಯಂತ ಮುಖ್ಯಮಂತ್ರಿ ಹಾಗೂ ಮಂತ್ರಿಗಳಿಗೆ ಫೇರಾವ್‌ ಹಾಕುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

City Today News

9341997936

ಹಲಾಲ್ ಸ್ಕ್ಯಾಮ್ ಮಾಡಿರುವ ಮನ್ಸೂರ್‌ ಅಲಿ ಖಾನ್ ಹೂಡಿರುವ ಮೊಕದ್ದಮೆಯನು ವಜಾ ಗೊಳಿಸಿ , ಉಳಿದ ಬಾಕಿದಾರರಿಗೆ ನ್ಯಾಯದೊರಕಿಸಿ

ಐ.ಎಂ.ಎ. ಸಂಸ್ಥೆಯು ರಾಜ್ಯದ ಅನೇಕ ಜನರಿಗೆ ಅದರಲ್ಲೂ ಸುಮಾರು 90 % ರಷ್ಟು ಅಲ್ಪಸಂಖ್ಯಾತರಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ . . ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೇಮಿಸಿದ್ದ ಐ.ಎ.ಎಸ್.ಆಫೀಸರ್‌ ಆಗಿರುವ ಶ್ರೀ ಹರ್ಷಗುಪ್ತರವರು ವಿಚಾರಣೆಯನ್ನು ನಡೆಸಿ , ಸುಮಾರು 5 ಸಾವಿರ ಕುಟುಂಬಗಳಿಗೆ ಪ್ರತಿ ಒಂದು ಕುಟುಂಬಕ್ಕೆ ರೂ . 50,000 / – ಗಳನ್ನು ಅವರವರ ಖಾತೆಗೆ ಜಮಾ ಮಾಡಿರುತ್ತಾರೆ . ಇದರಲ್ಲಿ ಸುಮಾರು 14 ಸಾವಿರ ಕುಟುಂಬಗಳು ಮೋಸ ಹೋಗಿದ್ದು , ಮೋಸ ಹೋಗಿರುವ ಕುಟುಂಬಗಳಲ್ಲಿ ಈಗಾಗಲೇ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದು , ಇನ್ನು ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡು , ಕೂಲಿ ಕೆಲಸ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ . ಮನ್ಸೂರ್‌ ಅಲಿ ಖಾನ್ ಈಗಾಗಲೇ ಮೊಕದ್ದಮೆಯನ್ನು ನ್ಯಾಯಾಲದಲ್ಲಿ ಹೂಡಿದ್ದು , ಈ ಮೊದಲು ನೇಮಕ ಮಾಡಿದಂತಹ ಐ.ಎ.ಎಸ್.ಅಧಿಕಾರಿಗಳಾದ ಹರ್ಷಗುಪ್ತರವನ್ನು ಬೇರೆ ಕಡೆ ವರ್ಗಾಯಿಸಿದ್ದು , ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಇನ್‌ಚಾರ್ಜ್ ಮಾಡಿರುತ್ತಾರೆ . ದಯಮಾಡಿ ತಾವುಗಳು ಇದಕ್ಕಾಗಿ ಪ್ರತ್ಯೇಕ ಒಬ್ಬ ಐ.ಎ.ಎಸ್‌.ಆಫೀಸರ್‌ನ್ನು ನೇಮಿಸಿ , ಮನ್ಸೂರ್‌ ಅಲಿ ಖಾನ್ ನ್ಯಾಯಾಲದಲ್ಲಿ ಹೂಡಿರುವ ಮೊಕದ್ದಮೆಯನ್ನು ವಜಾ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ . ಇನ್ನೂ ಉಳಿದಿರುವ ಬಾಕಿ ಮೊತ್ತವನ್ನು ಹೂಡಿಕೆದಾರರಿಗೆ ಮರಳಿ ನೀಡಬೇಕೆಂದರೆ , ಮನ್ಸೂರ್ ಆಲಿಖಾನ್ ಮಾವನಾದ ಅಬ್ಬಾಸ್ ಖಾನ್ ಇವನು ದುಬೈನಲ್ಲಿದ್ದು , ಅವನನ್ನು ಕರೆದುಕೊಂಡು ತನಿಖೆ ಕೈಗೊಂಡರೆ , ಉಳಿದ ಹಣ ವಾಪಸ್ ಬಂದು ಎಲ್ಲರಿಗೂ ನ್ಯಾಯದೊರಕಿಸಿಕೊಟ್ಟಂತೆ ಆಗುತ್ತದೆ . ಇದು ಎಲ್ಲಾ ಅಲ್ಪಸಂಖ್ಯಾತ ಹೂಡಿಕೆದಾರರಿಗೆ ಬಿ.ಜೆ.ಪಿ. ಸರ್ಕಾರ ದೊರಕಿಸಿಕೊಟ್ಟ ನ್ಯಾಯವಾಗಿರುತ್ತದೆ . ಈ ಕಾರ್ಯ ತ್ವರಿತವಾಗಿ ಕಾರ್ಯರೂಪಕ್ಕೆ ಬರಲು ಭಾರತೀಯ ಜನತಾ ಪಾರ್ಟಿಯೇ ಕಾರಣವಾಗಿರುತ್ತದೆ . ಕೇಂದ್ರ ಸರ್ಕಾರಕ್ಕೆ ನಾನು ದಿನಾಂಕ : 10-06-2019ರಲ್ಲಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆದಾಗ , ಕೇವಲ 10 ದಿನಗಳಲ್ಲಿಯೇ ಪ್ರಧಾನಮಂತ್ರಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು , ತನಿಖೆಗೊಳಪಡಿಸಿ ನ್ಯಾಯ ದೊರಕಿಸಿಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿರುತ್ತದೆ ಆಬ್ದುಲ್ ಮುಜೀಬ್ ರವರು ಎಂದು ತಿಳಿಸಿದರು.

City Today News

9341997936

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಮರುನೇಮಕ ಮಾಡಿ ಮುಂದುವರೆಸುವ ಬಗ್ಗೆ ಮನವಿ .

  1. ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕವಾಗಿ , 46 ಜಾತಿಗಳನ್ನೊಳಗೊಂಡ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ , ಇಡೀ ನೇಮಿಸಿದಕ್ಕೆ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಹತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ . ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಿಯಾಶೀಲ ಅಧ್ಯಕ್ಷರನ್ನು ಮತ್ತು ಬಿ.ಜೆ.ಪಿ ನೇತೃತ್ವದ ಸರ್ಕಾರಕ್ಕೆ ಸಮಸ್ತ ಅಲೆಮಾರಿ ಜನಾಂಗದವರ ಪರವಾಗಿ 2.ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲ್ಪಟ್ಟ ಶ್ರೀ ಕೆ.ರವೀಂದ್ರ ಶೆಟ್ಟಿಯವರು , 1 ವರ್ಷ 6 ತಿಂಗಳ ಅಲ್ಪ ಅವಧಿಯಲ್ಲಿ ಕರೋನಾ ಇದ್ದಂತಹ ಸಂದರ್ಭದಲ್ಲಿಯೂ ಸಹ ತಮ್ಮ ಜೀವವನ್ನು ಲೆಕ್ಕಿಸದೇ ಅಲೆಮಾರಿಗಳಿಗೆ ಆಹಾರ ಕಿಟ್‌ಗಳನ್ನು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಿ ಹಾಗೂ ಅತ್ಯಂತ ಕ್ರಿಯಾಶೀಲರಾಗಿ ಅಲೆಮಾರಿ ಜನಾಂಗದವರ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ . 3.ಈಗಾಗಲೇ 27 ಜಿಲ್ಲೆಗಳನ್ನು ಪ್ರವಾಸ ಮಾಡಿ 73 ತಾಲ್ಲೂಕುಗಲ್ಲಿ ಅಲೆಮಾರಿ ಜನಾಂಗದವರ ವಾಸ ಸ್ಥಾನ ಭೇಟಿ ನೀಡಿ ಅಲೆಮಾರಿ ಜನಾಂಗದವರ ಕುಂದು – ಕೊರತೆ , ಕಷ್ಟ – ಸುಖಗಳನ್ನು ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಮಾನ್ಯ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಹಾರವನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ . 4. ಈಗಲೂ ಸಹ ಆ ಭಾಗದ ಅಲೆಮಾರಿ ಬಂಧುಗಳು ನಮ್ಮನ್ನು ಯಾರು ಸಹ ಗುರುತಿಸಿರಲಿಲ್ಲ , ನಮ್ಮ ಗುಡಿಸಲು ಕೇರಿಗಳಿಗೆ ಭೇಟಿ ನೀಡಿರುವುದಿಲ್ಲ . ಮಾನ್ಯ ಅಧ್ಯಕ್ಷರು ಭೇಟಿ ನೀಡಿದಾಗ ಅವರ ಸಂಸ್ಕೃತಿಯ ರೀತಿಯಲ್ಲಿ ಉಡಾ : ಕಿನ್ನರಿ , ಡೋಲು , ಅಕ್ಷಯಪಾತ್ರೆ , ತಂಬೂರಿ ನುಡಿಸುವುದರ ಮೂಲಕ ಸ್ವಾಗತಿಸುತ್ತಿದ್ದರು . ಲಕ್ಷ ಜನಸಂಖ್ಯೆ ಇರುವುದು 5. 46 ಜಾತಿಗಳನ್ನೊಳಗೊಂಡ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು ಸರ್ಕಾರದ ದಾಖಲಾತಿಯ ಮಟ್ಟಿಗೆ 20 ಹೊಂದಿದ್ದು , ನಾವು ಅಲೆಮಾರಿ ಮತ್ತು ಅರೆ ಒಕ್ಕೂಟದಿಂದ ಸಮೀಕ್ಷೆ ಮಾಡಿದಾಗ 46 ಜಾತಿಗಳ ಸುಮಾರು 90 ಲಕ್ಷ ಜನಸಂಖ್ಯೆ ಕಂಡುಬಂದಿರುತ್ತದೆ . ಈಗಾಗಲೇ ಒಕ್ಕೂಟದಿಂದ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಜಾತಿವಾರು ಜನಗಣತಿ ಮಾಡಬೇಕೆಂದು ಮನವಿ ಮಾಡಿರುತ್ತೇವೆ . 6. ನಿಗಮದ ಮಾನ್ಯ ಅಧ್ಯಕ್ಷರು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಾವು ಡೇರೆ ಮುಕ್ತ ಮಾಡುತ್ತೇನೆ ಎಂದು ಮಾತು ನೀಡಿದ್ದು , ಅಲೆಮಾರಿ ಸಮುದಾಯಗಳ ನಾಡಿಮೀಡಿತವನ್ನು ಮತ್ತು ಮುಖ್ಯವಾಹಿಣಿಗೆ ಬರದ ಎಷ್ಟು ಸಮುದಾಯಗಳನ್ನು ಗುರುತಿಸಿದ್ದಾರೆ . ಈ ರೀತಿಯಾಗಿ ಅಲೆಮಾರಿ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅಧ್ಯಕ್ಷರಾದ ಕೆ.ರವೀಂದ್ರಶೆಟ್ಟಿಯವರನ್ನು ರಾಜ್ಯ ಸರ್ಕಾರ ಏಕಾಏಕೀ ತೆಗೆದಿರುವುದರಿಂದ ರಾಜ್ಯದ ಇಡೀ ಅಲೆಮಾರಿ ಬಂಧುಗಳು ಬಹಳ ಬೇಸರಗೊಂಡಿದ್ದಾರೆ . 7. ಈಗಾಗಲೇ ರಾಜ್ಯದ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳ ಅಧಿಕಾರಿಗಳಿಂದ ನಮ್ಮ ಒಕ್ಕೂಟದವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ . ಆದುದರಿಂದ ಘನವೆತ್ತ ಸರ್ಕಾರವು , ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶ್ರೀಯುತ ಕೆ.ರವೀಂದ್ರ ಶೆಟ್ಟಿಯವರನ್ನು ಮರುನೇಮಕ ಮಾಡಿ ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ( ಹಿಂದುಳಿದ ವರ್ಗ ಪ್ರವರ್ಗ -1 ) ಜನಾಂಗಗಳ ಒಕ್ಕೂಟದ ವತಿಯಿಂದ ಮಾಧ್ಯಮದ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು . ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಲ್.ಎ. ತುಮಕೂರು , ಕಾರ್ಯದರ್ಶಿ ಪ್ರತಾಪ್ ಜೋಗಿ , ಓ ಚಿತ್ರದುರ್ಗ , ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಚೈತ್ರ ಬೆಂಗಳೂರು , ಸಂಘಟನಾ ಕಾರ್ಯದರ್ಶಿ ವಿಲಾಸ್‌ಕುಮಾರ್‌ ಶಿಂಧೆ ವಿಜಯಪುರ , ರಾಜು ಕೆ.ಜೆ , ಯುವ ಘಟಕದ ಪ್ರಶಾಂತ್ ಹೆಳವರ , ಹನುಮೇಶ್ ಯಾದವ್ ಉಪಸ್ಥಿತರಿದ್ದರು .

(City Today News – 9341997936)

2021 2022 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತದ ಹಲ್ಲಿಂಗ್

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ರೈತರಿಂದ ರೈತರ ಅನುಕೂಲಕ್ಕಾಗಿ ರೈತರಿಗೆ ಹತ್ತಿರದಲ್ಲಿರುವ ” ಅಕ್ಕಿ ಗಿರಣಿಗಳಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಬೆಂಬಲ ಬೆಲೆ ಯೋಜನೆ ಅಡಿ ಭತ್ತವನ್ನು ರೈಸ್‌ಮಿಲ್ ಹಂತದಲ್ಲಿ ಖರೀದಿ ಮಾಡುವ ಪ್ರಕ್ರಿಯೆಯನ್ನು 2018-19ನೇ ಸಾಲಿನಲ್ಲಿ ಪ್ರಾರಂಭಿಸಿತು . ಈ ಯೋಜನೆಯಿಂದ ರೈತರಿಗೆ , ಕೃಷಿ ಕಾರ್ಮಿಕರಿಗೆ , ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಯಿತು . ಹಾಗೂ ಈ ಯೋಜನೆಯಿಂದ ಕೇಂದ್ರ ಸರಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಯಿತು . ನಂತರ ಈ ಯೋಜನೆಯು 2019-20 ಹಾಗೂ 2020-21 ರಲ್ಲಿ ಮುಂದುವರೆದು ಪೂರ್ಣ ಯಶಸ್ವಿಯಾಗಿದೆ . 2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈಸ್‌ಮಿಲ್ ಹಂತದಲ್ಲಿ ರೈತರಿಂದ ಭತ್ತ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ತೀರ್ಮಾನವನ್ನು ಸರಕಾರವು ಡಿಸೆಂಬರ್ -2021 ರಲ್ಲಿ ಪ್ರಕಟಿಸಿತು . ಈ ಹಂತದಲ್ಲಿ ಸರಕಾರವು ಅನುಮೋದಿತ ತಾತ್ಕಾಲಿಕ ದರಪಟ್ಟಿಯುಳ್ಳ ಕರಾರು ಪತ್ರವನ್ನು ನೀಡಿ ಕರಾರು ಮಾಡಿಕೊಳ್ಳಲು ರೈಸ್‌ಮಿಲ್ ಮಾಲೀಕರಿಗೆ ಏಜನ್ಸಿರವರ ಮೂಲಕ ಕೋರಲಾಯಿತು . ಆದರೆ ರೈಸ್‌ಮಿಲ್‌ ಮಾಲೀಕರಿಗೆ ಬರಬೇಕಾದ 2018-19 , 2019-20 , 2020-21 ನೇ ಸಾಲಿನ ಬರಬೇಕಾಗಿರುವ ಬಾಕಿ ಹಣ ಬಿಡುಗಡೆ ಮಾಡುವವರೆಗೆ ಕರಾರು ಮಾಡಿಕೊಳ್ಳುವುದಿಲ್ಲವೆಂದು ಸರಕಾರಕ್ಕೆ ಅಧಿಕಾರಿಗಳ ಮೂಲಕ ತಿಳಿಸಲಾಯಿತು . ಆದರೆ ಸರಕಾರದ ಪರವಾಗಿ ಖರೀದಿ ಏಜನ್ಸಿಯವರು ಭತ್ತ ಕಟಾವಿಗೆ ಬಂದಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ರೈಸ್ ಮಿಲ್ ಮಾಲೀಕರಿಗೆ ಭತ್ತ ಖರೀದಿಸಲು ಕೋರಿದಾಗ ರೈತರ ಹಿತದೃಷ್ಟಿಯಿಂದ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಏಜನ್ಸಿಯವರೊಂದಿಗೆ ತಾತ್ಕಾಲಿಕ ದರಪಟ್ಟಿಯುಳ್ಳ ಕರಾರು ಪತ್ರದಲ್ಲಿ ಕರಾರು ಮಾಡಿಕೊಂಡು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಿದೆವು . ಖರೀದಿ ಪ್ರಕ್ರಿಯೆ ಪ್ರಾರಂಭವಾದರೂ ಮಿಲ್ ಮಾಲೀಕರಿಗೆ ಬರಬೇಕಾದ ಬಾಕಿ ಹಣದ ಬಿಡುಗಡೆಗೆ ರಾಜ್ಯ ಗಿರಣಿದಾರರ ಸಂಘದ ಮೂಲಕ ಅಹಾರ ಸಚಿವರನ್ನು 2021 ನೇ ಡಿಸೆಂಬರ್‌ನಿಂದಲೂ ಕೋರುತ್ತಾ ಬರಲಾಯಿತು . ಹಾಗೂ ಮುಂದುವರೆಸಲಾಯಿತು .
ಈ ಈ ಮಧ್ಯದಲ್ಲಿ ಅಂದರೆ ಫೆಬ್ರುವರಿ -2022 ರಲ್ಲಿ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಿ ಚಾಲ್ತಿ ಇರುವ ಸಮಯದಲ್ಲಿ ಮತ್ತೊಂದು ದರಪಟ್ಟಿಯನ್ನು ಬಿಡುಗಡೆ ಮಾಡಿ ಹೊಸ ಕರಾರು ಮಾಡಿಕೊಳ್ಳಲು ಸರಕಾರವು ಸೂಚಿಸಿತು . ದರಪಟ್ಟಿಯಲ್ಲಿ ಹಲ್ಲಿಂಗ್ ಛಾರ್ಜ್ ರೂ .10 / – ಹೊರತುಪಡಿಸಿ ಹಿಂದಿನ ಸಾಲುಗಳಲ್ಲಿ ಇದ್ದ ದರಪಟ್ಟಿಯಲ್ಲಿನ ಕಾರ್ಯಚಟುವಟಿಕೆಗಳಿಗೆ ನೀಡುವ ವೆಚ್ಚದ ಬಾಬುಗಳನ್ನು ನಮೂದಿಸಿರುವುದಿಲ್ಲ . ಪ್ರಕ್ರಿಯೆ ಚಾಲ್ತಿಯಲ್ಲಿ ಇದ್ದುದರಿಂದ ಮತ್ತು ನಾವು ಹಿಂದೆ ಸರಿಯಲು ಸಾಧ್ಯವಿಲ್ಲದಿದ್ದರಿಂದ ದರಪಟ್ಟಿಯ ತಿದ್ದುಪಡಿಗೆ ಅವಕಾಶವಿದೆ ಎಂದು ತಿಳಿಸಿದ್ದರಿಂದ ಮತ್ತೊಂದು ಕರಾರು ಪತ್ರಕ್ಕೆ ಒಪ್ಪಿ ಪ್ರಕ್ರಿಯೆಯಲ್ಲಿ ಮುಂದುವರೆದಿದ್ದೇವೆ . ಭತ್ತ ಖರೀದಿ ಪ್ರಕ್ರಿಯೆಯು ಸರ್ಕಾರದ ನಿರ್ದೇಶನದಂತೆ 2022 ಮಾರ್ಚ್ 31 ಕ್ಕೆ ಕೊನೆಗೊಂಡಿರುತ್ತದೆ . ಏಪ್ರಿಲ್ 2022 ರಲ್ಲಿ ಭತ್ತವನ್ನು ಹಲ್ಲಿಂಗ್ ಮಾಡಲು ಸರಕಾರ ಸೂಚಿಸಿತು . ಆಗ ನಾವು 4 ತಿಂಗಳುಗಳಿಂದ ಅಂದರೆ ಡಿಸೆಂಬರ್ 2021 ರಿಂದ ಒತ್ತಾಯಿಸುತ್ತಾ ಬಂದಿದ್ದ ಹಳೆಯ ಬಾಕಿ ಹಣದ ಪಾವತಿ ಹಾಗೂ 2021-22ನೇ ಸಾಲಿನ ತಿದ್ದುಪಡಿ ಮಾಡಿದ ಹೊಸ ದರಪಟ್ಟಿ ನೀಡದೇ ಹಲ್ಲಿಂಗ್ ಪ್ರಾರಂಭಿಸುವುದಿಲ್ಲವೆಂದು ರಾಜ್ಯ ಅಕ್ಕಿ ಗಿರಣಿದಾರರ ಸಂಘದಿಂದ ಸಚಿವರಿಗೆ ಹಾಗೂ ಸಂಬಂಧಪಟ್ಟ ಖರೀದಿ ಏಜನ್ಸಿರವರಿಗೆ ಮುನರ್‌ ಮನವಿ ಸಲ್ಲಿಸಿದ್ದೇವೆ . ಒಟ್ಟು ಸುಮಾರು 6 ತಿಂಗಳುಗಳಿಂದ ಅಂದರೆ ಡಿಸೆಂಬರ್ -2021 ರಿಂದ ಇಲ್ಲಿಯವರೆಗೆ ಈ ವಿಚಾರವಾಗಿ ವಿವಿಧ ಜನಪ್ರತಿನಿಧಿಗಳಿಂದ ಹಾಗೂ ಶಾಸಕರಿಂದ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮಂಡ್ಯ ಮತ್ತು ಮೈಸೂರಿನಲ್ಲಿ ಮೇಲಿನ ವಿಚಾರವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ . ಈ ಹಿಂದಿನ 3 ವರ್ಷಗಳಿಂದ ಅಂದರೆ 2018-19 , 2019-20 , 2020-21ನೇ ಸಾಲಿನಲ್ಲಿದ್ದ ಮಾನ್ಯ ಅಹಾರ ಸಚಿವರುಗಳು ರಾಜ್ಯ ಗಿರಣಿ ಮಾಲೀಕರುಗಳ ಮತ್ತು ಅಧಿಕಾರಿಗಳ ಜಂಟಿ ಸಭೆ ಕರೆದು ನಮ್ಮ ಸಲಹೆ ಹಾಗೂ ಬೇಡಿಕೆಗಳನ್ನು ಪಡೆದು , ಚರ್ಚಿಸಿ , ಸಮಂಜಸವಾದ ದರಪಟ್ಟಿಯನ್ನು ಹೊಂದಿರುವ ಕರಾರು ಪತ್ರವನ್ನು ನೀಡಿ ಬೆಂಬಲ ಬೆಲೆ ಯೋಜನೆ ಯಶಸ್ವಿಯಾಗಲು ಸಹಕರಿಸಿದ್ದರು . ಆದರೆ ಅಕ್ಕಿ ಗಿರಣಿದಾರರೊಂದಿಗೆ ಯಾವುದೇ ಪೂರ್ವಭಾವಿ ಸಭೆ ನಡೆಸದ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸಮಂಜಸವಾಗಿಲ್ಲ . ಈಗ ಸಾರ್ವಜನಿಕ ಪಡಿತರ ವಿತರಣೆಗೆ ಅಕ್ಕಿ ಅವಶ್ಯಕತೆ ಇರುವುದನ್ನು ಮನಗಂಡು ಸಚಿವರು , ಹಾಗೂ ಅಧಿಕಾರಿಗಳು ರೈಸ್‌ಮಿಲ್ ಮಾಲೀಕರ ಮೇಲೆ ವಿವಿಧ ರೀತಿಯ ಒತ್ತಡವನ್ನು ಅಂದರೆ ( 1 ) ಭತ್ತವನ್ನು ಬೇರೆಡೆಗೆ ಎತ್ತುವಳಿ ಮಾಡುವುದಾಗಿ , ( 2 ) ಮಾಲೀಕರ ಮೇಲೆ ಒಪ್ಪಂದದ ಉಲ್ಲಂಘನೆ ಎಂದು ಕಾನೂನು ಕ್ರಮ ಕೈಗೊಳ್ಳುವುದಾಗಿ , ಬೆದರಿಕೆ ಹಾಕುತ್ತಿದ್ದಾರೆ . ಈ ಸಾಲಿನ ಅಕ್ಕಿ ಕೊಡುವವರೆವಿಗೂ ಹಳೆ ಬಾಕಿ ಹಣವನ್ನು ನೀಡುವುದಿಲ್ಲವೆಂದು ಹೇಳುತ್ತಿದ್ದಾರೆ . ಇದರಿಂದ ನಮ್ಮ ಗಿರಣಿದಾರರು ಬ್ಯಾಂಕ್‌ಗಳ ಸಾಲ ಮರುಪಾವತಿ , ವಿದ್ಯುತ್ ಬಿಲ್ ಪಾವತಿ , ಕಾರ್ಮಿಕರ ವೇತನ ಪಾವತಿಗೆ ತೊಂದರೆಯಾಗಿರುತ್ತದೆ . ಅಲ್ಲದೆ ನಮ್ಮ ಉದ್ದಿಮೆ ಆರ್ಥಿಕ ನಷ್ಟ ಹೊಂದಿ ಗಿರಣಿದಾರರು ದಿವಾಳಿಯಾಗುವ ಸನ್ನಿವೇಶದಲ್ಲಿದ್ದಾರೆ . ಆದ್ದರಿಂದ ರಾಜ್ಯದ ಅಕ್ಕಿ ಗಿರಣಿದಾರರು ನಮ್ಮ ಬೇಡಿಕೆ ಈಡೇರುವವರೆಗೂ ಅಕ್ಕಿಯನ್ನು ಸರಬರಾಜು ಮಾಡಲು ದುಸ್ಸಾಧ್ಯವಾಗಿರುತ್ತದೆ ಎಂದು ತಿಳಿಸುತ್ತೇವೆ ಎಂದು ಎಸ್.ಶಿವಕುಮಾರ್, ಸಾಮಾನ್ಯ- ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಮತ್ತು ಸಂಘದ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .

City Today News

9341997936